ಮೂರು ತಿಂಗಳಿಂದ ಕೀಮೋಥೆರಪಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಉಚಿತ ಚಿಕಿತ್ಸೆ ಸೌಲಭ್ಯವಿರುವುದು ಬಡವರಿಗೆ ಆಶಾದಾಯಕ ವಿಷಯವಾಗಿದೆ. ಆದರೆ ವೈದ್ಯರಿಲ್ಲದಿರುವುದು ಬೇಸರದ ಸಂಗತಿ.
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ವಿಜಯಪುರ ಜಿಲ್ಲೆಯ ರೋಗಿಗಳು ಕೀಮೋಥೆರಪಿ ಚಿಕಿತ್ಸೆ ಪಡೆಯಲು ಪುಣೆ, ಬೆಂಗಳೂರು ಸೇರಿದಂತೆ ಮೊದಲಾದ ಮಹಾನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿಯೇ ಸುಸಜ್ಜಿತ ಚಿಕಿತ್ಸೆ ದೊರೆಯುತ್ತಿದ್ದು ಪ್ರಯಾಸದಿಂದ ಪ್ರಯಾಣ ಮಾಡಬೇಕಾದ ಸಂಕಷ್ಟ ದೂರವಾಗಿದೆ.
ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಕೀಮೋಥೆರಪಿ ಇನ್ಪುಷನ್ ಸೆಂಟರ್ ಕ್ಯಾನ್ಸರ್ ರೋಗಿಗಳಿಗೆ ವರದಾನವಾಗಿದ್ದು, ಕ್ಯಾನ್ಸರ್ ರೋಗಿಗಳು ಕ್ರಿಟಿಕಲ್ ಕೀಮೋಥೆರಪಿ ಚಿಕಿತ್ಸೆಯನ್ನು ಇಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಕಲಬುರ್ಗಿಯ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ರೋಗಿಗಳಿಗೆ ಕೀಮೋಥೆರಪಿ ನೀಡಲು ಒಂದು ವರ್ಷದ ಹಿಂದೆ 10 ಹಾಸಿಗೆಗಳ ಕೇಂದ್ರವನ್ನು ವಿಜಯಪುರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಈ ಕೇಂದ್ರ ಸಹಾಯಕವಾಗಿದ್ದು, ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅಥವಾ ಪ್ರಮುಖ ಚಿಕಿತ್ಸೆಗಳಿಗೆ ಒಳಗಾದ ರೋಗಿಗಳಿಗೆ ಈ ಕೇಂದ್ರದಿಂದ ಉಚಿತವಾಗಿ ಔಷಧೋಪಚಾರ ನೀಡುತ್ತಿದ್ದಾರೆ
ಕ್ಯಾನ್ಸರ್ ರೋಗಿಗಳಿಗೆ ವರದಾನ
“ವಿಜಯಪುರದಲ್ಲಿ ಕೀಮೋಥೆರಪಿ ಕೇಂದ್ರವು ಆರಂಭವಾಗುವ ಮೊದಲು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿಯೇ ಕೀಮೋಥೆರಪಿ ಮಾಡಿಸಬೇಕಾಗಿತ್ತು. ಇದೀಗ ಈ ಕೇಂದ್ರವು ಜಿಲ್ಲಾಸ್ಪತ್ರೆಯಲ್ಲಿಯೇ ಆರಂಭವಾಗಿರುವುದರಿಂದ ಕೀಮೋಥೆರಪಿಗೆ ಬೆಂಗಳೂರು, ಪುಣೆ, ಹೈದರಾಬಾದ್‌ನಂತಹ ದೂರದ ಪ್ರದೇಶಗಳಿಗೆ ಪ್ರಯಾಣಿಸಲು ಖರ್ಚಾಗುತ್ತಿದ್ದ ಹಣ ಹಾಗೂ ಸಮಯ ಉಳಿಯುತ್ತದೆ. ಈ ಕೇಂದ್ರ ಆರಂಭವಾದ ಬಳಿಕ ಪ್ರತಿವಾರ ಕನಿಷ್ಠ ಆರು ರೋಗಿಗಳು ಕೀಮೋಥೆರಪಿಗೆ ಒಳಗಾಗುತ್ತಾರೆ” ಎನ್ನುತ್ತಾರೆ ಜಿಲ್ಲಾಸ್ಪತ್ರೆಯ ರೋಗಿಗಳು.
ಕಲಬುರಗಿಯಿಂದ ತಜ್ಞ ವೈದ್ಯರ ಭೇಟಿ
“ಈ ಕೇಂದ್ರಕ್ಕೆ ವಾರಕ್ಕೆ ಎರಡು ಬಾರಿ ಕಲಬುರಗಿಯ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಅಂಕೋಲಾಜಿಸ್ಟ್‌ಗಳು ಭೇಟಿ ನೀಡುತ್ತಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಇಲ್ಲಿಗೆ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಕೀಮೋಥೆರಪಿ ಮಾಡಿಸಿಕೊಳ್ಳಬೇಕಾದರೆ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ದಾಖಲೆಗಳನ್ನು ತರಬೇಕು. ರೋಗಿಯನ್ನು ಕೀಮೋಥೆರಪಿಗೆ ಒಳಪಡಿಸಲು ನಮಗೆ ರೋಗಿಯು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ರಿಪೋರ್ಟ್‌ಗಳನ್ನು ನೀಡಬೇಕಾಗುತ್ತದೆ. ಅವರು ಎಪಿಎಲ್ ಅಥವಾ ಬಿಪಿಎಲ್ ಯಾವುದೇ ಕಾರ್ಡ್ ಇದ್ದರೂ ಕೂಡ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
ಕ್ಯಾನ್ಸರ್ ತೀವ್ರತೆಯ ಆಧಾರದ ಮೇಲೆ ಅವರು ಯಾವ ಹಂತದಲ್ಲಿದ್ದಾರೆಂದು ಗುರುತಿಸಿ, 3 ರಿಂದ 6ರ ನಡುವೆ ಅವರ ಹಂತವನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು ₹15,000ದಿಂದ ₹30,000ದ ವರೆಗೂ ವೆಚ್ಚವಾಗುತ್ತದೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ ಉಚಿತವಾಗಿ ಹಾಗೂ ರಾಜ್ಯದಲ್ಲಿ ಇಂತಹ ಕೇಂದ್ರಗಳು ಆಯ್ದ ಕೆಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ.
ವೈದ್ಯರಿಲ್ಲದೆ ಬಣಗುಡುತ್ತಿದೆ
“ಮೂರು ತಿಂಗಳಿಂದ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಚಿಕಿತ್ಸೆ ಬಡವರಿಗೆ ಉಚಿತ ಸೌಲಭ್ಯವಿರುವುದು ಆಶಾದಾಯಕ ವಿಷಯವಾಗಿದೆ. ಆದರೆ ವೈದ್ಯರಿಲ್ಲದಿರುವುದು ಬೇಸರದ ವಿಷಯ.
ಇದನ್ನೂ ಓದಿದ್ದೀರಾ? ಬಾಗಲಕೋಟೆ | ತಮಗೆ ಬೇಕಾದ ಸೇತುವೆಯನ್ನು ತಾವೇ ನಿರ್ಮಿಸಿಕೊಂಡ ಕಂಕನವಾಡಿ ರೈತರು
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಸಿ ಮಾಸ್ತಿಹೊಳಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವೈದ್ಯರಿಲ್ಲದಿರುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಲಬುರಗಿಯಿಂದ ಬರುತ್ತಿದ್ದ ವೈದ್ಯರಿಗೆ ಅಲ್ಲಿಯ ಕೆಲಸದ ಒತ್ತಡದಿಂದ ಇಲ್ಲಿಗೆ ಬರಲು ಆಗುತ್ತಿಲ್ಲ” ಎಂದರು.
“ನಮ್ಮ ಸ್ವಂತ ಕಟ್ಟಡವು ಒಂದು ವರ್ಷದೊಳಗಾಗಿ ಪೂರ್ಣಗೊಳ್ಳಲಿದ್ದು, ಅಲ್ಲಿಯ ತನಕ ನಮ್ಮ ಆಸ್ಪತ್ರೆಯ ವೈದ್ಯರೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ” ಎಂದು ಮಾಹಿತಿ ನೀಡಿದರು.
ವಿಶೇಷ ವರದಿ : ವಿಜಯಪುರ ಜಿಲ್ಲಾ ಕೋಆರ್ಡಿನೇಟರ್ ರಮೇಶ್ ಹೊಸಮನಿ