ಸಣ್ಣ ನೀರಾವರಿ ಇಲಾಖೆಯಿಂದ 118 ಹಳ್ಳಿಗಳಿಗೆ 176 ಕೋಟಿ ರೂಪಾಯಿ ವೆಚ್ಚದಲ್ಲಿ ಹಳ್ಳ ತುಂಬಿಸುವ ಕಾರ್ಯ ಮಾಡಲಾಗುವುದು. ಕೆರೆ ತುಂಬಿದ ಮೇಲೆ ಅಂತರ್ಜಲ ಹೆಚ್ಚಳವಾಗಲಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುನಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬಬಲೇಶ್ವರ ಸೇರಿದಂತೆ ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ಹಳ್ಳ-ಕೊಳ್ಳಗಳು ಒತ್ತುವರಿಯಾಗಿವೆ. ರೈತರು ಸ್ವಯಂ ಪ್ರೇರಣೆಯಿಂದ ಹಳ್ಳ ಒತ್ತುವರಿ ತೆರವುಗೊಳಿಸಬೇಕು. ಅಲ್ಲಿ ಬೆಳೆದಿರುವ ಗಿಡಗಂಟಿ ತೆಗೆದು ಸಹಕರಿಸಿದರೆ ಹಳ್ಳ ತುಂಬಿಸುವ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಹೊಳೆಯನ್ನೇ ಹರಿಸುವೆ” ಎಂದು ಹೇಳಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಬಬಲೇಶ್ವರ ತಾಲೂಕಿನ ನಿಡೋಣಿ, ಯಕ್ಕುಂಡಿ, ನಾಗರಾಳ, ಕುಮಟೇ, ಅರ್ಜುಣಗಿ ಅಂಗಣಿ, ಕಾತ್ರಾಳ, ಚಿಕ್ಕಲಕಿ, ನಂದ್ಯಾಳ ದನ್ನರಗಿ, ಟಕ್ಕಳಕಿ, ಬಿಜ್ಜರಗಿ, ಗೊಣಸಗಿ ಮತ್ತು ಕಣಮಡಿ(ಗುಲಗಂಜಿ ) ಹಳ್ಳಿಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಮ್ ರಿಚಾರ್ಜ್ ಸ್ಟಾಟ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿಪಡಿಸುವ ₹9.88 ಕೋಟಿ ಮೊತ್ತದ ಕಾಮಗಾರಿಗೆ ಅರ್ಜುನಗಿಯಲ್ಲಿ ಭೂಮಿ ಪೂಜೆ ನೆರವೇರಿಸಿದರು.
ಇದನ್ನೂ ಓದಿ ವಿಜಯಪುರ | ಏ.19ರಂದು ಬಸವಜ್ಯೋತಿ ಪಾದಯಾತ್ರೆ
“ಇದೊಂದು ಪ್ರಾಯೋಗಿಕ ಯೋಜನೆಯಾಗಿದೆ. ನಮ್ಮ ಮತಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಮೂಲಕ ನಂತರದ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಸರಣಿ ಚೆಕ್ ಡ್ಯಾಮ್ ಯೋಜನೆಗೆ ಚಾಲನೆ ನೀಡಲಾಗುವುದು. ನೀರಾವರಿಯಿಂದ ಈ ಭಾಗದ ಜಮೀನುಗಳು ಎಕರೆಗೆ 20 ಲಕ್ಷ ಬೆಲೆಬಾಳುತ್ತವೆ. ಅದಕ್ಕೆ ಜಮೀನು ಮಾರಾಟ ಮಾಡಬಾರದು” ಎಂದು ರೈತರಿಗೆ ಕಿವಿಮಾತು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ₹9.97 ಲಕ್ಷ ವೆಚ್ಚದಲ್ಲಿ ಕಾರಜೋಳ, ದೋಡಿಹಾಳ, ಸಂಗಾಪುರ, ಕಾಖಂಡಕಿ, ಮಮದಾಪುರ ಮತ್ತು ಸಂಗಾಪುರ – ನಂದಿಹಾಳ ಗ್ರಾಮಗಳ ಹಳ್ಳಿಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಮ್ ಮತ್ತು ರಿಚಾರ್ಜ್ ಸ್ಟಾಪ್ ನಿರ್ಮಾಣ ಮಾಡುವ ಮೂಲಕ ಲೋಕೋಪಯೋಗಿ ಇಲಾಖೆಯ 5 ಕೋಟಿ ರೂ. ವೆಚ್ಚದಲ್ಲಿ ಕಂಬಾಗಿ ನಂದ್ಯಾಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ, ಕೆಆರ್‌ಐಡಿಎಲ್‌ನಿಂದ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ನಂದ್ಯಾಳ ಗ್ರಾಮದಲ್ಲಿ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಶಿವಾನಂದ ಸ್ವಾಮೀಜಿ, ಇಲಾಖೆಯ ಎಇಇ ಪ್ರಮೋದ ಹೊಟ್ಟಿ, ಗ್ಯಾರೆಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಹಣಮಂತರಾಯ ದಳವಾಗಿ ಇದ್ದರು.






