ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸಣ್ಣನವರ ಜಯಂತಿ ನಿಮಿತ್ತ ಜನ್ಮಸ್ಥಳ ಬಾಗೇವಾಡಿಯಿಂದ ವಿಜಯಪುರದವರೆಗೆ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸಹಯೋಗದಲ್ಲಿ ಇದೇ ಏ.19ರ ಭಾನುವಾರದಂದು ರಾತ್ರಿ 7ಗಂಟೆ ಸುಮಾರಿಗೆ ಬಸವಜ್ಯೋತಿ ಪಾದಯಾತ್ರೆ ಆರಂಭಿಸಲಾಗುವುದು ಎಂದು ಆಯೋಜಕ ಬಿ ಬಿ ಪಾಟೀಲ ತಿಳಿಸಿದರು.
ಬಸವಜ್ಯೋತಿ ಪಾದಯಾತ್ರೆ ಸಂಬಂಧದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ಈ ಬಾರಿ ವಿಶಿಷ್ಟ ರೀತಿಯಲ್ಲಿ ಬಸವ ಜಯಂತಿ ಆಚರಿಸಲಾಗುವುದು. ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಪಾದಯಾತ್ರಿಗಳು ಸಂಜೆ 6 ಗಂಟೆಗೆ ಹಾಜರಿರಬೇಕು. 6.30ಕ್ಕೆ ಪೂಜೆ ಸಲ್ಲಿಸಿದ ನಂತರ 7ಗಂಟೆಗೆ ಬಸವಜ್ಯೋತಿ ಪಾದಯಾತ್ರೆಗೆ ಬಸವನ ಬಾಗೇವಾಡಿ ವಿರಕ್ತಮಠದ ಪ.ಪೂ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಈ ಯಾತ್ರೆ ಮಸಬಿನಾಳ, ಉಕ್ಕಲಿ, ಉಕುಮನಾಳ ಮಾರ್ಗವಾಗಿ ಶಿವಗಿರಿ ತಲುಪಲಿದೆ. ನಂತರ ನಗರದ ಬಸವೇಶ್ವರ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. 50ಕಿ.ಮೀ ಮಾರ್ಗದುದ್ದಕ್ಕೂ ಪಾದಯಾತ್ರಿಗಳಿಗೆ ಅಲ್ಪೋಪಹಾರ ಮತ್ತು ಲಘುಪಾನೀಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಸ್ವಯಂ ಪ್ರೇರಿತರಾಗಿ 150ಕ್ಕೂ ಹೆಚ್ಚು ಬಸವಾನುಯಾಯಿಗಳು ನೋಂದಣಿ ಮಾಡಿಕೊಂಡಿದ್ದು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಟಿ-ಶರ್ಟ್, ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಆಯೋಜಕ ಬಿ ಬಿ ಪಾಟೀಲ ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಏ.20ರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ಮಾಡಿದರೆ ಜೈಲು; ಜಿಲ್ಲಾಡಳಿತ ಖಡಕ್ ಎಚ್ಚರಿಕೆ
ಈ ಸಂದರ್ಭದಲ್ಲಿ ಕೋಟಿವೃಕ್ಷ ಅಭಿಯಾನ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಯದರ್ಶಿ ಸೋಮಶೇಖರ ಸ್ವಾಮಿ, ಸದಸ್ಯರಾದ ಶಾಂತೇಶ ಕಳಸಗೊಂಡ, ಸಂತೋಷ ಔರಸಂಗ, ಡಾ.ರಾಜು ಯಲಗೊಂಡ, ಶಂಭು ಕರ್ಪೂರಮಠ, ಡಿ.ಕೆ.ತಾವಸೆ, ಗುರುಶಾಂತ ಕಾಪಸೆ, ಅಶ್ಪಾಕ ಮನಗೂಳಿ, ಸಿದ್ದು ನಾಯ್ಕೋಡಿ, ಸೋಮು ಮಠ, ವಿಜಯಕುಮಾರ ಕೋರೆ, ಅಮೀತ ಬಿರಾದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




