- ಬರದ ನಡುವೆ ಸಚಿವ ಶಿವಾನಂದ ಪಾಟೀಲರಿಂದ ಮೋಜು-ಮಸ್ತಿ: ವಿಜಯೇಂದ್ರ
- ಕಪ್ಪು ಹಣದ ಖಜಾನೆ ಇರುವಲ್ಲಿ ದಾಳಿ ನಡೆಸದೇ ಬಡವರ ಮನೆ ಶೋಧಿಸಲಾದೀತೆ?
ರಾಜ್ಯದಲ್ಲಿ ಬರ ಕಾಡುತ್ತಿದೆ. ರೈತಾಪಿ ವರ್ಗ ಕಂಗಾಲಾಗಿ ಕುಳಿತಿದೆ, ಜನತೆ ಸಂಕಷ್ಟ ಎದುರಿಸುತ್ತಿದೆ ಇಂಥಾ ಪರಿಸ್ಥಿತಿಯಲ್ಲಿ ಸಚಿವ ಶಿವಾನಂದ ಪಾಟೀಲರು ಮೋಜು-ಮಸ್ತಿಯ ಕಾರ್ಯಕ್ರಮದ ನಡುವೆ ಕಾಂಚಾಣದ ಚೆಲ್ಲಾಟದಲ್ಲಿ ಮೈಮರೆತು ಕುಳಿತಿದ್ದಾರೆ ಎಂದು ಶಾಸಕ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, “ರೋಮ್ ಹೊತ್ತಿ ಉರಿಯುತ್ತಿದ್ದಾಗ ರೋಮನ್ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದ ಎಂಬಂತೆ ವರ್ತಿಸುವ ಕಾಂಗ್ರೆಸ್ ‘ಕೈ’ಲಿ ಕರ್ನಾಟಕ ರಾಜ್ಯ ನಲುಗುತ್ತಿದೆ. ಕುರುಡು ಕಾಂಚಾಣ ಕುಣಿಯುತಲಿತ್ತು. ಕಾಂಗ್ರೆಸ್ ಮಂತ್ರಿಗಳ ಕಾಲಿಗೆ ಬಿದ್ದು ಒದ್ದಾಡುತಲಿತ್ತೋ” ಎಂದು ವ್ಯಂಗ್ಯವಾಡಿದ್ದಾರೆ.
ಐಟಿ ದಾಳಿ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಅವರು, “ಕಪ್ಪು ಹಣದ ಖಜಾನೆ ಇರುವಲ್ಲಿ ದಾಳಿ ನಡೆಸದೇ ಬಡವರ ಮನೆ ಶೋಧಿಸಲಾದೀತೆ? ಕಲಾವಿದರ ಸಂಭಾವನೆಯಿಂದಲೂ ಕಮಿಷನ್ ವಸೂಲಿ ದಂಧೆಗಿಳಿದಿರುವ ನಿಮ್ಮ ಸರ್ಕಾರದ ಆಡಳಿತದ ಹೀನಾಯ ಭ್ರಷ್ಟ ಮುಖ ಜನರ ಮುಂದೆ ತೆರೆದು ಕೊಂಡಿದೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ‘ಲಂಚ ಭಾಗ್ಯ’ ಯೋಜನೆ ನಿಮ್ಮ ಮುಂದಿನ ಹೆಜ್ಜೆ ‘ಪರ್ಸೆಂಟೇಜ್’ ನಿಗದಿ ನಿಮ್ಮ ಮುಂದಿನ ಗುರಿ ಎಂಬುದು ಖಾತ್ರಿಯಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಹಸಿದ ಹೊಟ್ಟೆಗಳು ಹೇಳುತ್ತಿರುವ ಕುಬೇರರ ಕಥೆ
“ರಾಜ್ಯದಲ್ಲಿ ನಡೆದ ಆದಾಯ ತೆರಿಗೆ ಶೋಧ ಕಾರ್ಯವನ್ನು ಮುಖ್ಯಮಂತ್ರಿ ಸ್ಥಾನದಲ್ಲಿರುವ ನೀವು ಸ್ವಾಗತಿಸಬೇಕಿತ್ತು, ಆದರೆ ಉದ್ಯಮಿಗಳು, ಗುತ್ತಿಗೆದಾರರ ವಕ್ತಾರರಂತೆ ಮಾತನಾಡಿ ಶೋಧಕಾರ್ಯವನ್ನು ಚುನಾವಣಾ ಹಿನ್ನಲೆಗೆ ಹೋಲಿಸಿರುವುದನ್ನು ನೋಡಿದರೆ ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡನಂತೆ’ ಎಂಬ ಗಾದೆ ಮಾತು ನೆನಪಿಗೆ ತರಿಸುತ್ತಿದೆ, ಸರ್ಕಾರಿ ತನಿಖಾ ಸಂಸ್ಥೆಗಳ ನೈತಿಕ ಸ್ಥೈರ್ಯ ಕಸಿಯುವ ‘ಹತಾಶೆ’ ನಿಮ್ಮ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ” ಎಂದು ಕುಟುಕಿದ್ದಾರೆ.
“ಜೈಲು ಭಾಗ್ಯ ಕಂಡ ಹಾಗೂ ಕಾಣಬೇಕಿರುವ ಅನೇಕರು ನಿಮ್ಮ ಪಕ್ಷ ಹಾಗೂ ಸರ್ಕಾರದಲ್ಲಿರುವುದನ್ನು ಮರೆತು ನೀವು ಮಾನ್ಯ ಯಡಿಯೂರಪ್ಪನವರ ಹೆಸರು ಉಲ್ಲೇಖಿಸುತ್ತಿದ್ದೀರಿ, ವ್ಯವಸ್ಥಿತ ರಾಜಕೀಯ ಚಕ್ರವ್ಯೂಹ ಭೇದಿಸಿ ನ್ಯಾಯಾಂಗ ಹೋರಾಟದ ಮೂಲಕ ನ್ಯಾಯದ ಶ್ರೀರಕ್ಷೆ ಪಡೆದು ಮತ್ತೆ ಜನತಾ ನ್ಯಾಯಾಲಯದಲ್ಲಿ ಜನಾಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನ ಮುಡಿಗೇರಿಸಿಕೊಂಡ ಬಿ ಎಸ್ ಯಡಿಯೂರಪ್ಪ ಅವರ ಇತಿಹಾಸ ನೀವು ಮರೆತಂತೆ ಮಾತನಾಡುವುದು ನಿಮಗೆ ಘನತೆ ತರದು” ಎಂದು ತಿರುಗೇಟು ನೀಡಿದ್ದಾರೆ.