- ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಮೊದಲ ಬಾರಿಗೆ ಕನ್ನಡದ ಸಾಂಸ್ಕೃತಿಕ ಕಲರವ
- 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ: ಸ್ಪೀಕರ್ ಯು ಟಿ ಖಾದರ್ ಸಹಿತ ಹಲವರು ಭಾಗಿ
‘ಮನುಷ್ಯಜಾತಿ ತಾನೊಂದೆ ವಲಂ’ ಎಂಬುದು ಕನ್ನಡ ಸಾಹಿತ್ಯದ ಅಸ್ಮಿತೆ. ವಿಶ್ವ ಮಾನವ ಪ್ರಜ್ಞೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಕನ್ನಡಕ್ಕಿದೆ ಎಂದು ಹಿರಿಯ ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಹೇಳಿದರು.
ಅವರು ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ನಡೆಯುತ್ತಿರುವ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
“ಇಂದು ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಕನ್ನಡವಿದೆ. ಕನ್ನಡವನ್ನು ವಿಶ್ವವ್ಯಾಪಿಯನ್ನಾಗಿಸುವಲ್ಲಿ ತುಳುವರು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟಿ ಬೆಳೆಸಿದವರಲ್ಲಿ ಮೊದಲಿಗರು ತುಳುವರು. ಮಾತ್ರವಲ್ಲ, ತುಳು ಸಂಘಟನೆಗಳನ್ನು ಕಟ್ಟುವ ಮೊದಲೇ ಕನ್ನಡ ಸಂಘಟನೆಗಳನ್ನು ಕಟ್ಟಿದ ತುಳುವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ” ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಸಮ್ಮೇಳನ ಉದ್ಘಾಟಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಸ್ವಾಗತಿಸಿದರು.
ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ 2004ರ ಸ್ಥಾಪಕಾಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಫಿರೋಝ್ ಕಲ್ಲಡ್ಕ ಮನವಿ ವಾಚಿಸಿದರು. ಸಾಹಿಲ್ ಝಹೀರ್, ಡಾ. ಭವಾನಿ ನಿತಿನ್ ರಾವ್ ಮತ್ತು ನಾಗರಾಜ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.
ಸಚಿವ ರಹೀಮ್ ಖಾನ್, ಕರ್ನಾಟಕ ಸರಕಾರದ ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಶಾಸಕ ಅಶೋಕ್ ರೈ, ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್., ಡಾ. ಯು.ಟಿ. ಇಫ್ತಿಕಾರ್, ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಝಕರಿಯಾ ಜೋಕಟ್ಟೆ ಮತ್ತು ಶೇಖ್ ಕರ್ನಿರೆ, ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್, ಪ್ರಧಾನ ಕಾರ್ಯದರ್ಶಿ ರಫೀಕ್ ಸೂರಿಂಜೆ, ಯೋಗೀಶ್ ಪೂಜಾರಿ ಮುಹಮ್ಮದ್ ಶರೀಫ್ ಬೋಳಾರ್, ಮುಹಮ್ಮದ್ ಅಶ್ರಫ್ ಕರ್ನೀರೆ, ಸುದೀಶ್ ಹೆಗ್ಡೆ ರಾಜ್ ಕುಮಾರ್ ಮತ್ತು ಯೂನುಸ್ ಖಾಝಿ ಉಪಸ್ಥಿತರಿದ್ದರು.
ವಿಶ್ವಮಾನ್ಯ ಪ್ರಶಸ್ತಿ ಪ್ರದಾನ
ಸಮ್ಮೇಳನದಲ್ಲಿ ಅನಿಲ್ ಭಾಸಗಿ ಕತಾರ್, ಮೊಹಮ್ಮದ್ ರಫೀ ಪಾಷಾ, ರಾಜಕುಮಾರ್ ಬಹರೇನ್, ಶಿವಾನಂದ ಕೋಟ್ಯಾನ್, ಯಾಕೂಬ್ ಖಾದರ್ ಗುಲ್ವಾಡಿ, ಅಶ್ರಫ್ ಶಾಮಂತೂರ್, ಝಕರಿಯಾ ಜೋಕಟ್ಟೆ, ಕೆ. ಎಸ್. ಶೇಖ್ ಕರ್ನೀರೆ ಮತ್ತು ಸತೀಶ್ ಕುಮಾರ್ ಬಜಾಲ್ ಅವರಿಗೆ ವಿಶ್ವಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಕುದ್ರೋಳಿ ಗಣೇಶ್ ಅವರಿಂದ ಮ್ಯಾಜಿಕ್ ಶೋ, ಗೋಪಿ ಅವರಿಂದ ಮಿಮಿಕ್ರಿ, ಕನ್ನಡ ಮತ್ತು ಬ್ಯಾರಿ ಹಾಡುಗಳ ರಸಮಂಜರಿ, ಭರತನಾಟ್ಯ, ವೀರ ಕನ್ನಡಿಗ ನೃತ್ಯ, ಕತಕ್ ನೃತ್ಯ, ಹಾಸ್ಯ ಭಾಷಣ, ಸಾಯಿ ಕೃಷ್ಣ ಮತ್ತು ಉಮೇಶ್ ಮಿಜಾರು ಅವರಿಂದ ತುಳು ಹಾಸ್ಯ ಪ್ರಹಸನ, ಯಕ್ಷನೃತ್ಯ, ಗೋನಾ ಸ್ವಾಮಿ ಮತ್ತು ಬಳಗದಿಂದ ಭಾವಮಂಜರಿ, ಜನಪದ ಹಾಡು ಮತ್ತು ಯಕ್ಷಗಾನ ರೂಪಕ ಜನ ಮೆಚ್ಚುಗೆ ಗಳಿಸಿತು.
ಬಹುಭಾಷಾ ಕವಿಗೋಷ್ಠಿ
ಹುಸೈನ್ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರಭಾ ಸುವರ್ಣ, ಯಾಕೂಬ್ ಖಾದರ್ ಗುಲ್ವಾಡಿ, ಬಶೀರ್ ಅಹ್ಮದ್ ಕಿನ್ಯಾ, ಶಮೀಮಾ ಕುತ್ತಾರ್, ರೈಹಾನ್ ವಿ.ಕೆ. ಸಚ್ಚೇರಿಪೇಟೆ, ಆರಿಫ್ ಜೋಕಟ್ಟೆ ಮತ್ತು ಫೌಝಿಯಾ ಅರ್ಶದ್ ಕನ್ನಡ, ಬ್ಯಾರಿ ಮತ್ತು ತುಳು ಕವನ ವಾಚನ ಮಾಡಿದರು.