ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಚಿನ್ನಯ್ಯ (ಭೀಮ) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಹೊತ್ತಿನಲ್ಲಿ ನಕಲಿ ಮಾಸ್ಕ್ ಮ್ಯಾನ್ ಬಳಸಿ ಭಾರೀ ಸುಳ್ಳುಗಳನ್ನು ಹರಿಬಿಟ್ಟಿರುವ ‘ವಿಶ್ವವಾಣಿ’ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಆಗ್ರಹ ಬಂದಿದೆ.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಒಂದು ಗುಂಪು ನಡೆಸಿರುವ ‘ಧರ್ಮ ಸಂರಕ್ಷಣಾ ಸಮಾವೇಶ’ದಲ್ಲಿ ಮಾಸ್ಕ್ ಧರಿಸಿಕೊಂಡು ಕಾಣಿಸಿಕೊಂಡಿರುವ ವ್ಯಕ್ತಿಯೊಬ್ಬನ ಮಾತುಗಳನ್ನು ‘ವಿಶ್ವವಾಣಿ ಟಿವಿ’ ಯೂಟ್ಯೂಬ್ ಚಾನೆಲ್ ಯಥಾವತ್ತು ಪ್ರಕಟಿಸಿದೆ. ಬೇಜವಾಬ್ದಾರಿ ಮೆರೆದು, ಪತ್ರಿಕಾಧರ್ಮವನ್ನು ಮರೆತಿರುವ ವಿಶ್ವವಾಣಿ ಹಾಗೂ ವಿಡಿಯೊದಲ್ಲಿ ಮಾತನಾಡಿರುವ ನಕಲಿ ಮಾಸ್ಕ್ ಮ್ಯಾನ್ ವಿರುದ್ಧ ಎಸ್‌ಐಟಿ ಕ್ರಮ ಜರುಗಿಸಬೇಕೆಂಬ ಒತ್ತಾಯ ಬಂದಿದೆ.
“ಮೊದಲು ತಮಿಳುನಾಡಲ್ಲಿ ಕೆಲಸ ಮಾಡುತ್ತಿದ್ದೆ. ಆ ನಂತರ ಪಾಕಿಸ್ತಾನಕ್ಕೆ ಕರೆದುಕೊಂಡು ಹೋದರು. ಗುಜರಾತ್ ಮೂಲಕ ನನ್ನನ್ನು ಕರೆದೊಯ್ಯಲಾಗಿತ್ತು. ಅಲ್ಲಿಂದ ಖೋಟಾನೋಟುಗಳನ್ನು ತರಿಸಲಾಗುತ್ತಿತ್ತು. ಅದನ್ನೆಲ್ಲ ತಂದು ಮಾರುತ್ತಿದ್ದೆ. ಇನ್ನೂ ದುಡ್ಡು ಬರುತ್ತದೆ ಎಂದು ಈ ಪ್ಲಾನ್ ಕೊಟ್ಟರು. ಕೊನೆಗೆ ನನ್ನ ತಲೆ ಮೇಲೆಯೇ ಈ ಪ್ಲಾನ್ ಬಿದ್ದಿದೆ” ಎನ್ನುತ್ತಾನೆ ಮಾಸ್ಕ್ ಮ್ಯಾನ್. ಜೊತೆಗೆ ಕೈಯಲ್ಲಿ ಹಿಡಿದಿರುವ ತೆಂಗಿನಕಾಯಿ ಚಿಪ್ಪನ್ನು ತೋರಿಸುತ್ತಾನೆ.
ಮುಂದುವರಿದು ವಿಶ್ವವಾಣಿ ವರದಿಗಾರ, “ಹಣದ ಆಮಿಷ ಅಷ್ಟೇ ಅಲ್ಲ, ಮತ್ತೆ ಏನೇನು ಆಫರ್ ಕೊಟ್ಟರು?” ಎಂದು ಕೇಳುತ್ತಾನೆ. ಅದಕ್ಕೆ ನಕಲಿ ಮಾಸ್ಕ್ ಮ್ಯಾನ್, “ಮನೆ ಕಟ್ಟಿಕೊಡುತ್ತೇನೆ ಎಂದರು. ಏನೇನೋ ಆಸೆ ತೋರಿಸಿದರು. ಎಲ್ಲವನ್ನೂ ಮೈಕ್ ಮುಂದೆ ಹೇಳಲು ಆಗಲ್ಲ. ಬಹಳ ಆಸೆ ತೋರಿಸಿದರು. ಕೊನೆಗೆ ಇದನ್ನು (ಚಿಪ್ಪನ್ನು) ಕೊಟ್ಟರು” ಎನ್ನುತ್ತಾನೆ.
ವರದಿಗಾರ: ಪೂಜ್ಯ ಖಾವಂದರಾದ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡಲು ಏನು ಹೇಳಿಕೊಟ್ಟರು?
ಮಾಸ್ಕ್ ಮ್ಯಾನ್: ಅದೇ ಮುಖ್ಯವಾಗಿ ಇದ್ದದ್ದು. ನಾನು ಹೇಳಲ್ಲ ಅಂದ್ರೆ ಹಿಂದಗಡೆ ಗನ್ ಇಟ್ಟಿದ್ದರು. ನನ್ನ ಬಳಿ ವಿಡಿಯೊ ಇದೆ, ತೋರಿಸಲಾ? ಪಬ್ಲಿಕ್‌ನಲ್ಲೇ ತೋರಿಸುತ್ತೇನೆ. (ಜೇಬಿಗೆ ಕೈ ಹಾಕುವ ರೀತಿ ನಾಟಕವಾಡುತ್ತಾನೆ. ಪಕ್ಕದಲ್ಲಿದ್ದವರು ಬೇಡ ಬಿಡಿ, ಬೇಡ ಬಿಡಿ ಎನ್ನುತ್ತಾರೆ. ಮಾತು ಮುಂದುವರಿಸುತ್ತಾನೆ). ತಿಮರೋಡಿ ನನ್ನ ಬೆನ್ನಿಗೆ ಗನ್ನಿಟ್ಟಿದ್ದ. ಬಿಹಾರದವರು ಮಾಡುವ ಕಟ್ಟಾಗನ್ ಅದಾಗಿತ್ತು. ತೋಟದಲ್ಲಿ ಗಾಂಜಾ ಬೆಳೆಸುತ್ತಿದ್ದ. ಕಿತ್ತುಕೊಂಡು ಬಾ ಅಂತ ಕಳುಹಿಸುತ್ತಿದ್ದ. ನಾನೇ ಹೋಗಿ ಕಿತ್ತುಕೊಂಡು ಬರುತ್ತಿದ್ದೆ. ಅದನ್ನು ಒಣಗಿಸಿ, ತಿಮರೋಡಿಗೆ ರಾತ್ರಿ ಕಳುಹಿಸುತ್ತಿದ್ದೆವು. ಅದನ್ನು ಅವರು ಮಾರಿಕೊಂಡು ಬರುತ್ತಿದ್ದರು.
ವಿಶ್ವವಾಣಿ ವರದಿಗಾರ: ನೀವು ಎಲ್ಲ ಒಪ್ಪಿಕೊಂಡುಬಿಟ್ರಾ? ಭಯ ಏನೂ ಆಗಲಿಲ್ಲವಾ?
ಮಾಸ್ಕ್ ಮ್ಯಾನ್: ನಾಲ್ಕು ಜನ ವಕೀಲರು ಬಂದು ಕೈ ತುಂಬಾ ದುಡ್ಡು ಕೊಟ್ಟರು. ಆಮಿಷಕ್ಕೆ ನಾನು ಒಳಗಾದೆ. ನನ್ನಿಂದ ತಪ್ಪಾಗಿದೆ. ಇನ್ನ ಮೇಲೆ ಇದನ್ನೆಲ್ಲ ಮಾಡಲ್ಲ. ಜೈ ಮಂಜುನಾಥ, ಜೈ ಅಣ್ಣಪ್ಪ.
ಹೀಗೆ ಸಾಗುತ್ತದೆ ವಿಡಿಯೊ. ಇದರ ಜೊತೆಗೆ ‘ವಿಶ್ವವಾಣಿ ಜೊತೆ ಮಾತನಾಡಿದ ಮಾಸ್ಕ್ ಮ್ಯಾನ್ ಚಿನ್ನಯ್ಯ’ ಎಂಬ ಟೈಟಲ್‌ನಲ್ಲಿ ರೀಲ್ಸ್ ಕೂಡ ಹರಿಬಿಡಲಾಗಿದೆ. “ನನಗೆ ಮೂರು ವ್ಯಕ್ತಿಗಳು ದುಡ್ಡು ಕೊಟ್ಟಿದ್ದರು. ಜಮೀರ್ ಎಂಡಿ, ಅಲ್ತಾಫ್ ಮತ್ತು ಸುಹೇಲ್ ಎಂಬವರು ಹಣ ನೀಡಿದ್ದರು. ತಿಮರೋಡಿಯ ನಿಜವಾದ ಹೆಸರು ಅಲ್ತಾಫ್. ಹದಿನೈದು ವರ್ಷಗಳ ಹಿಂದೆಯೇ ಆತ ಇಸ್ಲಾಂಗೆ ಮತಾಂತರ ಆಗಿದ್ದಾನೆ. ಆತ ದುಡ್ಡುಕೊಟ್ಟು ಅಗೆಯಲು ಹೇಳಿದ. ಏನಾದರೂ ಸಿಕ್ಕಿತೇನ್ರಪ್ಪ. ಚಿಪ್ಪು ಸಿಕ್ಕಿತು. ಐದು ಲಕ್ಷ ಕೊಡ್ತೀನಿ ಅಂದಿದ್ರು. ಕೊಟ್ಟಿಲ್ಲ. ಜಮೀರ್, ಅಬ್ದುಲ್ಲಾ, ಷರೀಫ್- ಇವರೇ ಹೇಳಿದ್ದು. ಗಿರೀಶ್ ಮಟ್ಟಣ್ಣ ಇದ್ದಾನಲ್ಲ, ಆತ ಹಿಂದೂವಲ್ಲ. ಇಸ್ಲಾಂಗೆ ಕನ್ವರ್ಟ್ ಆಗಿದ್ದಾನೆ. ಆತ ಗುಜರಾತ್ ಮೂಲಕ ಪಾಕಿಸ್ತಾನಕ್ಕೆ ಹೋಗಿ ಖೋಟಾ ನೋಟು ತಗೊಂಡು ಬರುತ್ತಿದ್ದ. ಅದನ್ನು ಮಾರು ಎನ್ನುತ್ತಿದ್ದ. ನಾವು ಮಾರುತ್ತಿರಲಿಲ್ಲ” ಎಂಬ ಮಾತು ರೀಲ್ಸ್‌ನಲ್ಲಿದೆ.
ಇದನ್ನೂ ಓದಿರಿ: ಧರ್ಮಸ್ಥಳ ಪ್ರದೇಶದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣ: ಸಾಕ್ಷಿ ದೂರುದಾರನ ಬಂಧನ
ವಿಶ್ವವಾಣಿ ಮಾಡಿರುವ ಈ ವರದಿಗೆ ಜನರು ಅಪಹಾಸ್ಯ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್ ಮಾಡಿರುವ ಜನರು ಕ್ರಮಕ್ಕೆ ಆಗ್ರಹಿಸಿದ್ದಾರೆ. “ವಿಶ್ವವಾಣಿ ಪತ್ರಿಕೆ ಬಹಳ ಸ್ಫೋಟಕ ಮತ್ತು ಇಂಟ್ರೆಸ್ಟಿಂಗ್ ನ್ಯೂಸ್ ಒಂದನ್ನು ಹೊರ ಬಿಟ್ಟಿದೆ. ಇದನ್ನು ಎಸ್‌ಐಟಿ ಬಹಳ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಬೇಕು. ಇಂತಹ ಒಂದು ‘ಸ್ಫೋಟಕ ಸತ್ಯ’ವನ್ನು ವಿಶ್ವಕ್ಕೆ ತೋರಿಸಿ ಕೊಟ್ಟ ವಿಶ್ವೇಶ್ವರ ಭಟ್ ನಡೆಸುವ ವಿಶ್ವವಾಣಿ ಪತ್ರಿಕೆಯನ್ನು ಮೆಚ್ಚಲೇ ಬೇಕು. ಸರಕಾರ ತಕ್ಷಣ ಈ ವಾರ್ತೆಯ ನಿಜಾಂಶವನ್ನು ಬಯಲುಗೊಳಿಸಬೇಕಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತ ಸುಲೇಮಾನ್ ಕಲ್ಲಾರ್ಪೆ ಆಗ್ರಹಿಸಿದ್ದಾರೆ.
“ಯಾರ್ಯಾರನ್ನೋ ಅರೆಸ್ಟ್ ಮಾಡುತ್ತಾರೆ. ಈ ವಿಡಿಯೋ ಮಾಡಿದವರನ್ನು ಮೊದಲು ಅರೆಸ್ಟ್ ಮಾಡಬೇಕು” ಎಂದು ಯೂಟ್ಯೂಬ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
