ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್ಟಿಐ ಕಾರ್ಯಕರ್ತ ಗಂಗರಾಜು ವಿರುದ್ಧ ಸ್ಮಶಾನವೊಂದರಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಮಾಚಾರ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಅವರಲ್ಲಿ ಓರ್ವ ಶ್ರೀರಾಮ ಸೇನೆಯ ಮುಖಂಡನೆಂದು ತಿಳಿದುಬಂದಿದೆ.
ಆರೋಪಿ, ಶೀರಾಮ ಸೇನೆಯ ಮುಖಂಡ ಮಂಗಳೂರು ಮೂಲದ ಪ್ರಸಾದ್ ಅತ್ತಾವರ ಎಂದು ಹೇಳಲಾಗಿದೆ. ಆರೋಪಿಯ ಮೊಬೈಲ್ನಲ್ಲಿ ವಾಮಾಚಾರದ ವಿಡಿಯೋ ದೊರೆತಿದೆ. ಆರೋಪಿಗಳು ಬೆಂಗಳೂರಿನ ಆಶೋಕ ನಗರ ಸ್ಮಶಾನದಲ್ಲಿರುವ ಕಾಳಿಕಾಂಬ ಗುಡಿಯಲ್ಲಿ ವಾಮಾಚಾರ ಮಾಡಿದ್ದಾರೆ. ಕುರಿಯನ್ನು ಬಲಿಕೊಟ್ಟು, ಅದರ ರಕ್ತವನ್ನು ಸ್ನೇಹಮತಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗೆ ಲೇಪಿಸಿ ದೇವರ ವಿಗ್ರಹಕ್ಕೆ ನೇತುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ, ಮಂಗಳೂರಿನ ಬಿಜೈ ಬಳಿಯ ಸಲೂನ್ ಒಂದರ ಮೇಲೆ ಶ್ರೀರಾಮ ಸೇನೆಯ ಮುಖಂಡ ಪ್ರಸಾದ್ ಅತ್ತಾವರ ಸೇರಿದಂತೆ ಹಲವರು ದಾಳಿ ನಡೆಸಿದ್ದರು. ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ದಾಂಧಲೆ ನಡೆಸಿದ್ದರು. ಸಲೂನ್ ಮಾಲೀಕ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಕೊಂಡ ಪೊಲೀಸರು ಆರೋಪಿ ಪ್ರಸಾದ್ ಅತ್ತಾವರನನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ಆತನ ಮೊಬೈಲ್ಅನ್ನು ಪರಿಶೀಲಿಸಿದಾಗ ವಾಮಾಚಾರ ಮಾಡಿರುವ ವಿಡಿಯೋ ಪತ್ತೆಯಾಗಿದೆ.
ವಿಡಿಯೋದಲ್ಲಿ, ಸ್ಮಶಾನದ ಗುಡಿಯ ಮುಂದೆ, ಪ್ರಾಣಿ ಬಲಿ ಕೊಟ್ಟು, ಅದರ ರಕ್ತವನ್ನು ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ಲೇಪಿಸಿದ್ದಾರೆ. ಅಲ್ಲದೆ, ಸ್ನೇಹಮಯಿ ಕೃಷ್ಣ, ಗಂಗರಾಜು, ಪ್ರಸಾದ್ ಅತ್ತಾವರ, ಶ್ರೀನಿಧಿ ಹಾಗೂ ಸುಮಾ ಆಚಾರ್ಯ ಹೆಸರುಗಳಿರುವ ಚೀಟಿಗಳನ್ನು ಹಾರದಂತೆ ಜೋಡಿಸಿ, ದೇವರ ವಿಗ್ರಹದ ಕೊರಳಿಗೆ ಹಾಕಿರುವುದು ಕಂಡು ಬಂದಿದೆ.
ಜೊತೆಗೆ, ಹಲವಾರು ಸರಣಿ ಪ್ರಾಣಿ ಬಲಿ ಕೊಟ್ಟಿರುವ ವಿಡಿಯೋಗಳು ಆತನ ಮೊಬೈಲ್ನಲ್ಲಿ ದೊರೆತಿವೆ. ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.