ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ಬಿಸಿಲು, ರೋಗಬಾಧೆ ಕಾರಣದಿಂದಾಗಿ ಕಾಳು ಮೆಣಸಿನ ಇಳುವರಿ ಕಡಿಮೆಯಾಗುತ್ತಿದೆ. ಇಳುವರಿ ಕಡಿಮೆಯಾದಂತೆ ಬೆಲೆ ಏರಿಕೆಯಾಗುತ್ತಿದೆ. ಇದೀಗ, ಕಾಳು ಮೆಣಸು ದರವು ಒಂದು ಕೆ.ಜಿ.ಗೆ 1,000 ರೂ. ಗಡಿ ದಾಟುತ್ತಿದೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲಿ ಕಾಳು ಮೆಣಸು ದರವು ಕಳೆದ ಎರಡು ವರ್ಷಗಳಲ್ಲಿ ಸುಮಾರು 40%ರಷ್ಟು ಏರಿಕೆಯಾಗಿದೆ. ಎರಡು ವರ್ಷಗಳ ಹಿಂದೆ, ಕಾಳು ಮೆಣಸು ಬೆಲೆ ಕೆ.ಜಿ.ಗೆ 400 ರೂ. ಇತ್ತು. ಈ ವರ್ಷದ ಆರಂಭದಲ್ಲಿ 700 ರೂ.ಗೆ ಏರಿಕೆಯಾಗಿತ್ತು. ಇದೀಗ, ಮತ್ತೆ ಬೆಲೆ ಏರಿಕೆಯಾಗಲಿದ್ದು, 900 ರಿಂದ 1,100 ರೂ.ವರೆಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
“ಕಾಳು ಮೆಣಸನ್ನು ಹೇರಳವಾಗಿ ಬೆಳೆಯುವ ವಿಯೆಟ್ನಾಂ ಮತ್ತು ಬ್ರೆಜಿಲ್‌ನಲ್ಲಿಯೂ ಇಳುವರಿ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಕಾಳು ಮೆಣಸು ಬೆಳೆಯುವ ಕೊಡಗು, ಜಿಕ್ಕಮಗಳೂರು ಜಿಲ್ಲೆಯಲ್ಲಿ ಇಳಿವರಿ ಕುಸಿದಿದೆ. ಜೊತೆಗೆ, ಸೋಂಕು, ರೋಗಗಳಿಂದ ಕಾಳು ಮೆಣಸಿನ ಬಳ್ಳಿಗಳು ನಾಶವಾಗುತ್ತಿವೆ. ಹೀಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಬಿಕ್ಕಟ್ಟು ಎದುರಾಗಿದೆ. ಬೇಡಿಕೆಯ ಒತ್ತಡ ಜಾಸ್ತಿಯಾಗಿದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ಕರ್ನಾಟಕದಲ್ಲಿ ಕಾಳು ಮೆಣಸು ಬೆಲೆಯು 1,000 ರೂ. ಗಡಿ ದಾಟುವ ಸಾಧ್ಯತೆಗಳಿವೆ” ಎಂದು ಕರ್ನಾಟಕ ಸಾಂಬಾರು ಸಂಘ ಮತ್ತು ಚಿಕ್ಕಮಗಳೂರು ಪ್ಲಾಂಟರ್ಸ್ ಅಸೋಸಿಯೇಷನ್ ಹೇಳಿವೆ.
ಬೇಸಿಗೆ ಬಿಸಿಲಿನಿಂದಾಗಿ ಕಾಳು ಮೆಣಸು ಬಳ್ಳಿಗಳು ಹೂವು ಬಿಡುವುದು ವಿಳಂಬವಾಯಿತು. ಹೂವು ಬಿಡುವ ವೇಳೆಗೆ ಅಕಾಲಿಕ ಮಳೆ ಸುರಿಯಿತು. ಮಳೆಯಿಂದಾಗಿ ಹೂವುಗಳೆಲ್ಲವೂ ಉದುರಿಹೋಗಿವೆ. ಇದು, ಕಾಳು ಮೆಣಸು ಉತ್ಪಾದನೆ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಕರ್ನಾಟಕ ಸ್ಪೈಸ್ ಅಸೋಸಿಯೇಷನ್ ಹೇಳಿದೆ.