“ವಿಶ್ವಕರ್ಮ ಸಮುದಾಯದ ಯುವಕರು ಜಾಗೃತರಾಗುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ಕೆಲಸವಾಗಬೇಕು” ಎಂದು ವಿಶ್ವಕರ್ಮ ಸಂಪನ್ಮೂಲ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿಗಳು ಯುವಕರಿಗೆ ಕಿವಿ ಮಾತು ಹೇಳಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯಮಟ್ಟದ ಸಮಾವೇಶ ಹಾಗು ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದಲ್ಲಿ ಮಕ್ಕಳು 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಸಮುದಾಯಕ್ಕೆ ಉತ್ತಮ ಸಂದೇಶವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಮಕ್ಕಳು ಹೆಚ್ಚು ಮುಂದೆ ಬರಬೇಕು ಎಂದು ಹೇಳಿದರು.
ವಿಶ್ವಕರ್ಮ ಸಮಾಜ ಒಳ್ಳೆಯ ಚಿಂತನೆಗಳನ್ನು ಇಟ್ಟುಕೊಂಡು ಬೆಳೆದು ಬಂದಿದೆ. ಸಮುದಾಯ ಜಾಗೃತ ವಾಗಬೇಕಾದರೆ ಮಠಾಧಿಪತಿಗಳು, ಸ್ವಾಮಿಜಿಗಳು ಮುನ್ನೆಲೆಗೆ ಬರಬೇಕು. ಪ್ರತಿ ಜಿಲ್ಲೆಗಳಲ್ಲೂ ಧರ್ಮದ ಉದ್ದಾರ, ಸಮಾಜ ಬೆಳೆಸುವ ಕೆಲಸವನ್ನು ಸ್ವಾಮೀಜಿಗಳು ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಯಾರ ಮೇಲೂ ದ್ವೇಷವಿಲ್ಲ, ತಾರತಮ್ಯ ಮಾಡುವುದಿಲ್ಲ. ವಿಶ್ವಕರ್ಮ ಸಮಾಜದವರು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಕೂಡಿ ಸಮಾಜದ ಚಿಂತನೆಗಳ ಬಗ್ಗೆ ಗಮನಹರಿಸಬೇಕು ಎಂದು ಸಮುದಾಯಕ್ಕೆ ಸಂದೇಶವನ್ನು ಸಾರಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಸಮುದಾಯದ ಮಹಿಳಾ ರಾಜ್ಯಾಧ್ಯಕ್ಷೆ ವಸಂತ ಮುರಳಿ ಮಾತನಾಡಿ, ಸಮುದಾಯದಲ್ಲಿ ದುಡಿಯುತ್ತಿರುವ ಹಾಗೂ ಶೈಕ್ಷಣಿಕವಾಗಿ ಮುಂದೆ ಬರುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರತಿ ವರ್ಷವೂ ಸಹ ಪ್ರತಿಭಾ ಪುರಸ್ಕಾರ ಹಾಗೂ ವಿಶ್ವಕರ್ಮ ಪ್ರಶಸ್ತಿಯನ್ನು ನೀಡುತ್ತಾ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ನಾವು ಯಾವತ್ತೂ ಸಹ ಸಮಾಜದ ಸುಧಾರಣೆಗೆ, ಅಭಿವೃದ್ಧಿಗೆ ಸದಾ ಮುಂದೆ ಇರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿರುವ ಜಯಸೂರ್ಯ ಹಾಗೂ ಪಿಯುಸಿಯಲ್ಲಿ ಆದಿತ್ಯ ಅವರು ಶೇಕಡ 99 ಅಂಕಗಳನ್ನು ಪಡೆಯುವ ಮೂಲಕ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ. ಇನ್ನು ಇದೇ ವೇಳೆ ಸಮುದಾಯದ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ 10 ಜನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾವೇಶದಲ್ಲಿ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿಎಸ್ ಶಿವಣ್ಣ, ಸಮುದಾಯದ ಮಠಾಧೀಶರು, ಸ್ವಾಮೀಜಿಗಳು, ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿಶ್ವಕರ್ಮ ಸಮುದಾಯದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.