ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಕುರಿತು ವಿಡಿಯೋಗಳನ್ನು ಮಾಡಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಸಮೀರ್ ವಿರುದ್ಧ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮತ್ತು ನಿಶ್ವಲ್ ಎಂಬವರು ಬೆಂಗಳೂರಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 10 ಕೋಟಿ ರೂ. ಪರಿಹಾರ ಕೊಡಿಸಬೇಕೆಂದು ಕೋರಿದ್ದಾರೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ‘ಊರ ಗೌಡ’ರನ್ನು ಉಲ್ಲೇಖಿಸಿ ಸಮೀರ್ ವಿಡಿಯೋ ಮಾಡಿದ್ದರು. ಆ ವಿಡಿಯೋ ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ವಿರೇಂದ್ರ ಹೆಗಡೆ ಅವರನ್ನು ಗುರಿಯಾಸಿಕೊಂಡಿದೆ ಎಂದು ಆರೋಪಿಸಲಾಗಿತ್ತು. ವಿಡಿಯೋ ಡಿಲೀಟ್ ಮಾಡುವಂತೆ ಧರ್ಮಸ್ಥಳದ ಪರವಾಗಿ ಕೆಲವರು ನ್ಯಾಯಾಲಯದಿಂದ ಆದೇಶ ತಂದಿದ್ದರು.
ಆದಾಗ್ಯೂ, ಸಮೀರ್ ವಿಡಿಯೋ ಡಿಲೀಟ್ ಮಾಡಿರಲಿಲ್ಲ. ಈಗ ಸಮೀರ್ ವಿರುದ್ಧ ಧರ್ಮಸ್ಥಳದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಮತ್ತು ನಿಶ್ಚಲ್ 10 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.
ಮಾನನಷ್ಟ ಮೊಕದ್ದಮೆ ಅರ್ಜಿ ಪರಿಶೀಲಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಅವರು ಪ್ರತಿವಾದಿ ಸಮೀರ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಬೇಕು. ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.