ಕೋಲಾರ: ಸ್ವಾಸ್ಥ್ಯಸಮಾಜವನ್ನು ನೆಲೆಗೊಳಿಸಲು ಶ್ರಮಿಸಿದ ಮಹಾತ್ಮ ಗಾಂಧೀಜಿಯನ್ನು ಪೂಜಿಸಿದರೆ ಸಾಲದು, ಅವರ ಆಶಯಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಹೇಳಿದ್ದಾರೆ.
ಗಾಂಧಿ ಜಯಂತಿ ಪ್ರಯುಕ್ತ ಅರಿವು ಭಾರತ ಮತ್ತು ಪ್ರಕ್ರಿಯೆ ಸಂಘಟನೆಗಳು ನೆನಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಹಭೋಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಗಾಂಧಿ ಪ್ರತಿಪಾದಿಸಿದ ಶಾಂತಿ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆ, ಆತ್ಮಗೌರವ ಮೊದಲಾದ ಆಶಯಗಳನ್ನು ಈಡೇರಿಸುವ ಕೆಲಸಗಳಾಗಬೇಕು ಎಂದರು. ಮಾತಿಗಿಂತ ಕೃತಿಯ ಮೂಲಕ ಗಾಂಧಿಯನ್ನು ಗೌರವಿಸಲು ಅರಿವು ಭಾರತ ಸಹಭೋಜನ ಹಮ್ಮಿಕೊಂಡಿದೆ ಎಂದರು.
ಅಂತರ ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವ ಮೂಲಕ ಜಾತಿರಹಿತ ಸಮಾಜವನ್ನು ಕಟ್ಟಬಹುದು. ಅದು ಕಷ್ಠದ ಕೆಲಸವಾದರೂ ಮಾಡಲೇಬೇಕಾದ ಕೆಲಸ. ಮೇಲುಕೀಳಿನ ತಾರತಮ್ಯ ನಿವಾರಣೆಯಾಗಲು ಅಂತರ ಜಾತಿ ವಿವಾಹ ದೊಡ್ಡ ದಾರಿ ಎಂದು ಅವರು ತಿಳಿಸಿದರು.
ಅಸ್ಪೃಶ್ಯತೆ ನಿರ್ಮೂಲನೆಗೆ ಹಳ್ಳಿಯ ಜನರ ಮನಸ್ಸನ್ನು ಗೆಲ್ಲಬೇಕಿದೆ. ನಾಲ್ಕು ಕದ ತಟ್ಟಿದರೆ ಒಂದಾದರೂ ತೆರೆಯುತ್ತದೆ ಎಂಬುದನ್ನು ಅರಿವು ಭಾರತ ಹನ್ನೊಂದು ವರ್ಷಗಳಿಂದ ಸಾಧಿಸಿ ತೋರಿಸಿಕೊಟ್ಟಿದೆ. ಪ್ರಯತ್ನದಿಂದಷ್ಟೆ ಬದಲಾವಣೆ ಸಾಧ್ಯವಾಗುತ್ತದೆ. ಎಲ್ಲ ಸಂಘ ಸಂಸ್ಥೆಗಳು ಈ ಕೆಲಸಕ್ಕೆ ಕೈಜೋಡಿಸಬೇಕು ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಮಾತನಾಡಿ ಸಮಾಜ ಸುಧಾರಣೆಯ ಉತ್ತಮ ಕಾರ್ಯಕ್ರಮಗಳನ್ನು ಭಾರತದ ಹಳ್ಳಿಗಳಿಗೆ, ಗಲ್ಲಿಗಳಿಗೆ ತೆಗೆದುಕೊಂಡು ಹೋಗಬೇಕು. ಹಳ್ಳಿಗಳನ್ನು ಬಲಪಡಿಸಿದರೆ ಭಾರತವನ್ನು ಬಲಪಡಿಸಬಹುದು ಎಂದರು.
ಸಹಭೋಜನ ಏರ್ಪಡಿಸಿದ ನೆನಮನಹಳ್ಳಿ ಚಂದ್ರಶೇಖರ್ ಅವರಿಗೆ ಜಿಲ್ಲಾಧಿಕಾರಿಗಳು ಗ್ರಾಮರತ್ನ ಪುರಸ್ಕಾರವನ್ನು ನೀಡಿ ಗೌರವಿಸಿದರು.
ಇದನ್ನು ಓದಿದ್ದೀರಾ..? ಕಾಂಗ್ರೆಸ್ ಕಛೇರಿಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋಪಾಲಗೌಡ, ದಲಿತ ಮುಖಂಡ ಟಿ. ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮಿ, ಓಲಿವಿಯ ಓಂ ಪ್ರಕಾಶ್, ಅರಿವು ಭಾರತದ ಡಾ.ಶಿವಪ್ಪ ಅರಿವು, ವಾರಧಿ ಮಂಜುನಾಥರೆಡ್ಡಿ, ವಕೀಲ ಸೊಣ್ಣಪ್ಪ ಸತೀಶ್, ಹಾಡುಗಾರ ವೆಂಕಟಾಚಲಪತಿ, ನಿರೂಪಕಿ ಕೊಂಡರಾಜನಹಳ್ಳಿ ಮಂಜುಳ, ಪ್ರಕ್ರಿಯೆ ಸಂಸ್ಥೆಯ ಸೆಲ್ವನಾಥನ್, ಗ್ರೇಸಿ, ಮಾರ್ಜೆನಹಳ್ಳಿ ಬಾಬು, ಗಮನ ಶಾಂತಮ್ಮ, ಪಿಡಿಒ ಸವಿತಾ, ವಕೀಲ ಬಿ.ವಿ.ಶ್ರೀನಿವಾಸ ರಾವ್, ಶಿಕ್ಷಕ ರಾಮಚಂದ್ರ, ಗೋಪಿ ಕರವಿ, ರಾಮಪ್ಪ, ಪಾರೇಹೊಸಹಳ್ಳಿ ನಾರಾಯಣಪ್ಪ, ಗಣೇಶ್, ರಾಧಾಮಣಿ, ನಂಜಾಮರಿ ಮೊದಲಾದವರು ಭಾಗವಹಿಸಿದ್ದರು.

ಗಾಂಧಿಯನ್ನು ಪೂಜಿಸುವುದಕ್ಕಿಂತ ಅವರ ಆಶಯಗಳನ್ನು ಈಡೇರಿಸುವ ಕೆಲಸ ಮಾಡೋಣ- ಜಿಲ್ಲಾಧಿಕಾರಿ ಡಾ.ಎಂ. ಆರ್ ರವಿ.
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: