ಬಾಗೇಪಲ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಸ್ವಚ್ಛತಾ ಕಾರ್ಯ ಮರೆತಿರುವುದರಿಂದ ಮಾರುಕಟ್ಟೆ ಪ್ರಾಂಗಣ ಸ್ವಚ್ಛತೆ ಇಲ್ಲದೆ, ವರ್ತಕರು ಮತ್ತು ಗ್ರಾಹಕರು ಕಿರಿಕಿರಿ ಅನುಭವಿಸುವಂತಾಗಿದೆ.
ಎಲ್ಲೆಂದರಲ್ಲಿ ಕಸ, ತರಕಾರಿ ತ್ಯಾಜ್ಯದ ಜತೆಗೆ ಮಳೆ ಬಂದರೆ ಇಡೀ ಪ್ರಾಂಗಣವೇ ಕೆಸರುಗದ್ದೆಯಾಗಿ ಪರಿಣಮಿಸುತ್ತದೆ. ಹಾಗಾಗಿ ಮಾರುಕಟ್ಟೆಗೆ ಬರುವ ರೈತರು ವಿವಿಧ ರೋಗಗಳಿಗೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ.
ಬಯಲು ಶೌಚಕ್ಕಿಲ್ಲ ಕಡಿವಾಣ, ಕುಡಿಯುವ ನೀರಿನ ಸಮಸ್ಯೆ
ಸುಮಾರು ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕದಿಂದ ದೂರದೂರುಗಳಿಂದ ಮಾರುಕಟ್ಟೆಗೆ ಬಂದವರಿಗೆ ಕುಡಿಯುವ ನೀರು ಲಭ್ಯವಿಲ್ಲ. ಜೊತೆಗೆ ಮೂತ್ರ ವಿಸರ್ಜನೆಗೂ ಬಯಲು ಶೌಚವನ್ನೆ ಅವಲಂಬಿಸುವ ದುಸ್ಥಿತಿ ಎದುರಾಗಿದೆ. ಹೀಗೆ ರೈತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಹತ್ತು ಹಲವಾರು ಸಮಸ್ಯೆಗಳು ಪ್ರತಿ ನಿತ್ಯ ಸರ್ವೆ ಸಾಮಾನ್ಯವಾಗಿದೆ.
ಕೂಲಿ ಕಾರ್ಮಿಕರು, ಮಂಡಿ ಮಾಲೀಕರು ಹಾನಿಯಾದ ಹಾಗೂ ಕೊಳೆತ ಟೊಮೆಟೊ, ಹಾಗೂ ತರಕಾರಿಗಳನ್ನು ಕಸದ ಬುಟ್ಟಿಗೆ ಹಾಕದೇ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಪ್ರಾಂಗಣದಲ್ಲಿ ಸ್ವಚ್ಛತೆಗೆ ಲಕ್ಷಾಂತರ ಹಣ ನೀಡಲಾಗುತ್ತಿದೆ. ಆದರೆ ಸ್ವಚ್ಛತೆ ಮರೀಚಿಕೆ ಆಗಿದೆ. ಇದರಿಂದ ರಸ್ತೆಯೆಲ್ಲಾ ಕೊಳೆತ ಟೊಮೆಟೊ, ತರಕಾರಿಗಳು ರಾಶಿಗಟ್ಟಲೇ ಇದ್ದು ಕೊಳೆತ ದುರ್ನಾತ ಬೀರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಸಾಂಕ್ರಾಮಿಕ ರೋಗ ಭೀತಿ
ಮಾರುಕಟ್ಟೆಗೆ ಬರುವ ರೈತರು ಮತ್ತು ವರ್ತಕರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಹಾಗೂ ತ್ಯಾಜ್ಯದ ರಾಶಿಗಳಿಂದಾಗಿ ಸೊಳ್ಳೆಗಳ ಉಗಸ್ಥಾನಗಳಂತಾಗಿ ಸಾಂಕ್ರಾಮಿಕ ರೋಗಗಳ ಹರಡುವ ಭೀತಿಯನ್ನು ಎದುರಿಸುತ್ತಿದ್ದಾರೆ.ಏಕೆಂದರೆ
ಕಾಲಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ರೈತ ಮುಖಂಡರ ಆಕ್ರೋಶ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್.ಎನ್ ಗೋವಿಂದರೆಡ್ಡಿ ಮಾತನಾಡಿ, ನಿತ್ಯವೂ ಸಾವಿರಾರು ರೈತರು, ವರ್ತಕರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿರುತ್ತಾರೆ. ಅವರಿಗೆ ಕುಡಿಯಲೂ ನೀರಿಲ್ಲದಂತಹ ದುಸ್ಥಿತಿ ಎದುರಾಗಿದೆ. ಮಾರುಕಟ್ಟೆಗೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಹರಾಜು ಪ್ರಕ್ರಿಯೆ ಬಗ್ಗೆ ಗಮನ ನೀಡಬೇಕು. ಕೂಡಲೇ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕುಡಿಯುವ ನೀರು, ಶೌಚಾಲಯಗಳನ್ನು ವ್ಯವಸ್ಥೆ ಮಾಡಬೇಕು. ದೂರದಿಂದ ಬರುವ ರೈತರು ವಿಶ್ರಮಿಸಲು ರೈತರ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸಬೇಕು. ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕಿದೆ. ಹಾಗೆಯೆ ಮಾರುಕಟ್ಟೆಯ ನಿರ್ವಹಣೆ ತೀರಾ ಹದಗೆಟ್ಟಿದ್ದು, ಕೂಡಲೇ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಮ್ಮ ರೈತ ಸಂಘಟನೆಯ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.