- ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ಅಳವಡಿಸಿ
- ಸ್ವಾತಂತ್ರ್ಯೋತ್ಸವ ದಿನ ಆಚರಣೆ ಜೊತೆಗೆ ಸಂಗೊಳ್ಳಿ ರಾಯಣ್ಣನವರ ಜಯಂತಿ ಆಚರಿಸಿ
ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ವಿಜೃಂಭಣೆಯಿಂದ ಆಚರಣೆ ಜೊತೆಗೆ ಸ್ವಾತಂತ್ರ್ಯಕ್ಕೋಸ್ಕರ ಬ್ರಿಟಿಷರೊಂದಿಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿ ಆಚರಿಸಲು ಸೂಚಿಸುವಂತೆ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಸಂಬಂಧ ಔರಾದ ತಾಲೂಕು ಘಟಕದ ಕರವೇ ಕಾರ್ಯಕರ್ತರು ತಹಸೀಲ್ದಾರ್ ಮಲ್ಲಶೆಟ್ಟಿ ತಿಂದ್ರೆ ಅವರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದ್ದರು.
“ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಮಡಿದ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣರವರ ಜನ್ಮದಿನವಾದ ಆಗಸ್ಟ್ 15 ರಂದು ತಾಲೂಕಿನ ಎಲ್ಲಾ ಶಾಲಾ – ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಆಚರಿಸಬೇಕು” ಎಂದು ಒತ್ತಾಯಿಸಿದರು.
“ಎಲ್ಲಾ ಶಾಲಾ – ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ಅಳವಡಿಸಿ ಅವರ ಜೀವನ ಮತ್ತು ಹೋರಾಟದ ಕುರಿತು ಪರಿಚಯಿಸಿ ಗೌರವ ಸಲ್ಲಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ ಅನೀಲ ದೇವಕತ್ತೆ ಸೇರಿದಂತೆ ತಾಲೂಕಿನ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.