ಮಂಡ್ಯ ಜಿಲ್ಲೆ, ಕೆ ಆರ್ ಪೇಟೆ ಶತಮಾನದ ಶಾಲೆಗೂ ಒತ್ತುವರಿ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯ ಆಗಿಲ್ಲ. ಅನೇಕ ಕಾಣದ ಕೈಗಳು, ಬಲಾಢ್ಯ ಸಮುದಾಯದ ಜನರು ಹಾಗೂ ರಾಜಕೀಯ ಬೆಂಬಲವಿರುವ ಜನರು ಈ ಶಾಲೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಈ ಶಾಲೆಯ ಹಿಂಭಾಗ ಶೌಚಾಲಯಕ್ಕೆ ಹೊಂದಿಕೊಂಡಂತೆ 10 ಅಡಿ ಶಾಲೆಯ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಶಾಲೆಯ ಎಸ್‌ಡಿಎಂಸಿ ಸದಸ್ಯರು ಎಷ್ಟೇ ಪ್ರಯತ್ನ ಮಾಡಿದರು ಒತ್ತುವರಿ ಜಾಗವನ್ನು ಮತ್ತೆ ಬಿಡಿಸಿಕೊಳ್ಳಲು ಸಾಧ್ಯ ಆಗಿಲ್ಲ.

ಮಂಡ್ಯ ಜಿಲ್ಲೆ ಕೆಆರ್‌ಪೇಟೆ ಶತಮಾನದ ಶಾಲೆಯಲ್ಲಿ 2010ನೇ ಸಾಲಿನಲ್ಲಿ ಕೇವಲ 132 ಮಕ್ಕಳು ಮಾತ್ರ ಇದ್ದರು. ಒಂದೊಂದು ತರಗತಿಯಲ್ಲಿ ಹತ್ತು ಹದಿನೈದು ಮಕ್ಕಳು ಮಾತ್ರ ಓದುತ್ತಿದ್ದರು. ಶೀಳನೆರೆ ಕಾಲೇಜಿನ ಪ್ರಭಾರ ಪ್ರಂಶುಪಾಲರಾದ ಕತ್ತರಘಟ್ಟ ವಾಸು, ಮಂಜುನಾಥ್, ಸೋಮಶೇಖರ್ ಹಾಗೂ ಆ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾಗಿದ್ದ ಅಪರ ಜಿಲ್ಲಾಧಿಕಾರಿ ನಾಗರಾಜು ಮುಂತಾದವರು ಸಮಾಜಮುಖಿ ಜನರನ್ನು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಮಕ್ಕಳಮನೆ ಶುರು ಮಾಡಿ ಶಾಲೆಯನ್ನು ಅಭಿವೃದ್ಧಿಪಡಿಸಿದರು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಮಕ್ಕಳ ಮನೆ ಶುರು ಮಾಡಿದ್ದು ಕೆಆರ್‌ಪೇಟೆಯಲ್ಲಿ, ಅದು ಇಲ್ಲಿನ ಶತಮಾನದ ಶಾಲೆಯಲ್ಲಿ. ಅಂದು ಮಕ್ಕಳಮನೆ ಶುರು ಮಾಡಲಾಗಿ ಇಂದು ಪ್ರಾಥಮಿಕ ಶಾಲೆಯಲ್ಲಿ 900ಕ್ಕೂ ಹೆಚ್ಚು ಮಕ್ಕಳ ಎಣಿಕೆ ಏರಿಕೆಯಾಗಿದೆ. ಒಟ್ಟಾರೆ ಅವತ್ತಿನ ಪ್ರಯತ್ನದಿಂದ ಒಂದನೇ ತರಗತಿಯಿಂದ ಪಿಯುಸಿಯವರೆಗೆ ಓದುತ್ತಿರುವ ಮಕ್ಕಳ ಎಣಿಕೆ 2300 ಕ್ಕಿಂತ ಹೆಚ್ಚು. 1910 ರಲ್ಲಿ ಶುರುವಾದ ಕೆಆರ್‌ಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಒಟ್ಟು 6 ಎಕರೆ 38 ಗುಂಟೆಯಲ್ಲಿ ಇದೆ. ಈ ಶಾಲೆಯ ಆವರಣದೊಳಗೆ ಬಿಇಓ ಕಚೇರಿ, ಶಿಕ್ಷಕರ ಭವನ, ಸರ್ಕಾರಿ ನೌಕರರ ಪುತ್ತಿನ ಸಹಕಾರ ಸಂಘಗಳು ಕೂಡ ಇವೆ. ರಾಜ್ಯಕ್ಕೆ ಎರಡನೆಯ ಅತಿ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಶಾಲೆ ಇದು.
ಎಸ್‌ಡಿಎಂಸಿ ಸದಸ್ಯರಾದ ಗಂಗಾಧರ ಸ್ವಾಮಿ ಮಾತನಾಡಿ, ಕಳೆದ 2023ರ ಬೇಸಿಗೆ ರಜೆಯ ಸಂದರ್ಭದಲ್ಲಿ ಯಾರು ಇಲ್ಲದಿದ್ದಾಗ ಗಣಪತಿ ಸೇವಾ ಟ್ರಸ್ಟಿನವರು 10 ಅಡಿ ಶಾಲೆಯ ಜಾಗವನ್ನು ಒತ್ತುವರಿ ಮಾಡಿ ಗುಡಿಯನ್ನು ಕಟ್ಟಿದ್ದಾರೆ. ಬಿಎಸ್ಎನ್ಎಲ್ ಕಚೇರಿಯ ಪಕ್ಕದಲ್ಲೇ ಶಾಲೆಯ ಕಾಂಪೌಂಡನ್ನು ಹೊಡೆದು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗಣಪತಿ ಸೇವಾ ಟ್ರಸ್ಟಿನ ಜನರನ್ನು ಖುದ್ದು ಭೇಟಿ ಮಾಡಿ ಮಾತನಾಡಿಸಿದಾಗ, ಪ್ರಸ್ತುತ ಈ ವಾರ್ಡಿನ ಕೌನ್ಸಿಲರ್ ದಿನೇಶ್ ನಾವು ಒತ್ತುವರಿ ಜಾಗವನ್ನು ಬಿಡಲು ಸಾಧ್ಯವಿಲ್ಲ ಎಂದರು. ಸರಕಾರಿ ಶಾಲೆಗೆ ಸಂಬಂಧಿಸಿದ ಜಾಗವನ್ನು ನೀವು ಪುರಸಭೆ ಹಾಗೂ ಇನ್ನಿತರರಿಂದ ಬಿಡಿಸಿಕೊಳ್ಳಲು ಆಗಿಲ್ಲ. ಮೊದಲು ಅಲ್ಲಿ ಒತ್ತುವರಿ ಬಿಡಿಸಿ. ಇದನ್ನು ನಾವು ಬಿಡಲ್ಲ ನಿಮಗೆ ತಾಕತ್ತಿದ್ದರೆ ಬಿಡಿಸಿಕೊಳ್ಳಿ ನೋಡೋಣ ಎಂದು ಮಾತನಾಡಿದರು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ವಿಶ್ವಜ್ಞಾನಿ ಅಂಬೇಡ್ಕರ್ ಸಂಘದಿಂದ ಕಡತನಾಳು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ
ಈ ಶಾಲೆಗೆ ಸೇರಿದ 15 ಮಳಿಗೆಗಳನ್ನು ಪುರಸಭೆಯವರು ಒತ್ತುವರಿ ಮಾಡಿಕೊಂಡು ಬಳಸಿಕೊಳ್ಳುತ್ತಿದ್ದಾರೆ. ಈ ಮಳಿಗೆಗಳು ಶಾಲೆಯ ಆದಾಯದ ಮೂಲ ಆಗುತ್ತಿತ್ತು. ಆದರೆ ಪುರಸಭೆಯವರು ಬಿಟ್ಟುಕೊಡಲು ತಯಾರಿಲ್ಲ. ಇದರ ಸಂಬಂಧ ಸುಮಾರು 15 ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಇನ್ನು ತೀರ್ಮಾನ ಆಗಿಲ್ಲ ಎಂದು ತಿಳಿದು ಬಂದಿದೆ.
ಎಸ್‌ಡಿಎಂಸಿ ಸದಸ್ಯರು ಕಾನೂನಾತ್ಮಕ ಕ್ರಮ ಕೈಗೊಳ್ಳಲು ನಿರ್ಧರಿಸಿ, ಕಳೆದ ಆರು ತಿಂಗಳ ಹಿಂದೆ ಪೊಲೀಸ್ ಇಲಾಖೆ ಹಾಗೂ ಪುರಸಭಾ ಅಧಿಕಾರಿಗಳಿಗೆ ದೂರನ್ನು ನೀಡಿದ್ದೆವು. ಆದರೆ ಇದುವರೆಗೂ ಪೊಲೀಸರಾಗಲಿ ಇಲ್ಲವೇ ಪುರಸಭಾ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಶಾಲೆಯ ಆಸ್ತಿಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಮಾಹಿತಿಯನ್ನು ಮಧ್ಯಮದ ಮುಂದೆ ಇಡುವ ಅನಿವಾರ್ಯತೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಎಂಸಿ ಸದಸ್ಯರಾದ ನಾರ್ಗೋನಹಳ್ಳಿ ವೆಂಕಟೇಶ್ ಮಾತನಾಡಿ, ಇಲ್ಲಿನ ಉರ್ದು ಶಾಲೆ ಬಹಳ ಶಿಥಿಲವಾಗಿದೆ. ಶಾಲೆಯನ್ನು ಒತ್ತುವರಿ ಮಾಡಿ ದೇವಸ್ಥಾನವನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿನ ಶಾಸಕರು ಮುತುವರ್ಜಿ ವಹಿಸಿ ಅದನ್ನು ತೆರವುಗೊಳಿಸಬೇಕು. ಈ ಶಾಲೆಯ ಅಭಿವೃದ್ಧಿಗೆ ಅನುದಾನವನ್ನು ಆದ್ಯತೆಯಾಗಿ ನೀಡಬೇಕು. ಇಲ್ಲಿನ ಸರ್ಕಾರಿ ಕಚೇರಿಗಳನ್ನು ಬೇರೆಡಗೆ ವರ್ಗಾಯಿಸಬೇಕು. ಇಲ್ಲಿ ನಮ್ಮ ಮಕ್ಕಳಿಗೆ ಭದ್ರತೆ ಅನ್ನುವುದು ಇಲ್ಲದಂತಾಗಿದೆ. ಒಳ್ಳೆಯ ವಾತಾವರಣಕ್ಕೆ, ಮಕ್ಕಳ ಅನುಕೂಲಕ್ಕೆ ಇಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಬೇಕು. ಶಾಲೆಯನ್ನು ಹೊರತುಪಡಿಸಿ ಇಲ್ಲಿರುವ ಇನ್ನಿತರ ಸರಕಾರಿ ಕಚೇರಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ತಮ್ಮ ಮಾಧ್ಯಮದ ಮೂಲಕ ಸರಕಾರ ಹಾಗೂ ನಮ್ಮ ಶಾಸಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
