ತಮ್ಮೂರಿನ ಕೆರೆ ನೀರು ಹರಿಸಲು, ಕಾಲುವೆಗೆ 1,350 ಅಡಿ ಉದ್ದಕ್ಕೆ ತಾಡಪಾಲನ್ನು ಹಾಕಿ ಕೆರೆಗೆ ನೀರು ತುಂಬಿಸಲು ಮುಂದಾಗಿದ್ದಾರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಗಸಬಾಳದ ಗ್ರಾಮದ ರೈತರು.
ಫೆಬ್ರುವರಿ 19ರಿಂದ ಆಲಮಟ್ಟಿ ಜಲಾಶಯದಿಂದ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಲು ನೀರು ಬಿಡಲಾಗುತ್ತಿದೆ. ಮಾರ್ಚ್ ಮೊದಲ ವಾರದಲ್ಲಿ ಮುಳವಾಡ ಏತ ನೀರಾವರಿ ಯೋಜನೆಯಡಿ ಬರುವ ಹೂವಿನಹಿಪ್ಪರಗಿ ಶಾಖಾ ಕಾಲುವೆಯಿಂದ ಅಗಸಬಾಳ ಕೆರೆಗೂ ನೀರು ಹರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಾಲುವೆ ಪೂರ್ಣಗೊಂಡಿಲ್ಲ. ಆದರೆ, ರೈತರು ಕೆಲ ಗುತ್ತಿಗೆದಾರರ ಸಹಾಯದಿಂದ ಕಾಲುವೆಯಲ್ಲಿದ್ದ ಮಣ್ಣು ತೆಗೆಸಿ ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದಾರೆ..
ಬಳಿಕ ಕೃಷಿ ಹೊಂಡಕ್ಕೆ ಬಳಸುವ ತಾಡಪಾಲನ್ನು 100ಕ್ಕೂ ಹೆಚ್ಚು ಜನ ರೈತರು ಸೇರಿ ಶ್ರಮದಾನ ಮಾಡಿ ಕಾಲುವೆಗೆ ಅಳವಡಿಸಿದ್ದಾರೆ.
ಒಟ್ಟು 1,350 ಅಡಿ ಉದ್ದ, 30 ಅಡಿ ಅಗಲದ ತಾಡಪಾಲನ್ನು 1.30 ಲಕ್ಷ ರೂ. ವೆಚ್ಚದಲ್ಲಿ ದಾವಣಗೆರೆಯಿಂದ ಖರೀದಿಸಿ ತಂದು ಕಾಲುವೆಗೆ ಹಾಕಿದ್ದಾರೆ ರೈತರು. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ. ನೀವೇ ನೀರು ಹರಿಸಿಕೊಳ್ಳಲು ಏನಾದರೂ ವ್ಯವಸ್ಥೆ ಮಾಡಿಕೊಳ್ಳಿ ಎಂದಿದ್ದರು. ನೀರಿನ ಅವಶ್ಯಕತೆ ನಮಗಿದೆ. ಹೀಗಾಗಿ ತಾತ್ಕಾಲಿಕವಾಗಿ ನಾವೇ ಕಾಲುವೆಗೆ ತಾಡಪಾಲ ಹಾಕಿ ಕೆರೆಗೆ ನೀರು ಹರಿಸಲು ಶ್ರಮದಾನ ಮಾಡಿದ್ದೇವೆ ಎಂದು ರೈತರು ಮಾಧ್ಯಮಗಳಿಗೆ ತಿಳಿಸಿದರು.
ಮುಳವಾಡ ಏತ ನೀರಾವರಿ ಯೋಜನೆಯಡಿ ಈ ಕಾಲುವೆ ನಿರ್ಮಿಸಲಾಗಿದ್ದು, ಕಾಲುವೆಯಲ್ಲಿ ಮಣ್ಣು ತುಂಬಿತ್ತು. ಅದನ್ನು ಜೆಸಿಬಿಯಿಂದ ತೆರವುಗೊಳಿಸಿ, ಪ್ರತೀ ಮನೆಯಿಂದಲೂ ತಲಾ 1,000 ರೂ. ಹಣ ಹಾಕಿ ಈ ಕಾರ್ಯ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಮಾಹಿತಿ ಹಂಚಿಕೊಂಡಿದ್ದಾರೆ.