ಸ್ಥಳೀಯ ಆಡಳಿತ ಸಂಸ್ಥೆಗಳು ಗ್ರಂಥಾಲಯ ಕರ ಬಾಕಿ ಉಳಿಸಿಕೊಳ್ಳುವುದು ಒಂದೆಡೆಯಾದರೆ, ಮತ್ತೊಂದೆಡೆ ಸರಕಾರಿ ಇಲಾಖೆಗಳು ಅನುದಾನ ಇದ್ದರೂ ಕೋಟ್ಯಾಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯು ಒಂದು ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಇದಕ್ಕೆ ನಿದರ್ಶನವಾಗಿದೆ.
ಹೌದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯು ಸುಮಾರು 1.03ಕೋಟಿ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದು, ಈಗಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ(ಹಳೇ ಜಿಲ್ಲಾಸ್ಪತ್ರೆ)ಯು 64.54ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸದೆ ಮೀನಾಮೇಷ ಎಣಿಸುತ್ತಿವೆ. ಇಡೀ ಜಿಲ್ಲೆಯಲ್ಲೆ ಅತೀ ದೊಡ್ಡ ಮೊತ್ತದ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳಾಗಿವೆ.
ಸರಕಾರದ ಎಲ್ಲಾ ಇಲಾಖೆಗಳು ಪ್ರತೀ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುತ್ತಿವೆ. ಕೆಲ ಇಲಾಖೆಗಳು 3 ತಿಂಗಳಿಗೊಮ್ಮೆ, ಇನ್ನೂ ಕೆಲ ಇಲಾಖೆಗಳು ಅನುದಾನ ಬಂದಾಗ ಬೆಸ್ಕಾಂ ಬಿಲ್ ಪಾವತಿ ಮಾಡುತ್ತಿವೆ. ಹೀಗಿರುವಾಗ ಜಿಲ್ಲಾಸ್ಪತ್ರೆ ಮಾತ್ರ ಕೋಟ್ಯಾಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ.
ಬೇರೆ ಕೆಲಸಗಳಿಗೆ ಬಳಕೆ :
ಜಿಲ್ಲಾಸ್ಪತ್ರೆಗೆ ಬಂದ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸಿಕೊಂಡಿದ್ದು, ಅಲ್ಲಿನ ಅಧಿಕಾರಿಗಳು ವಿದ್ಯುತ್ ಬಿಲ್ ಪಾವತಿಸದಂತೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲಾಖೆ ವತಿಯಿಂದ ಹಲವು ಬಾರಿ ನೋಟೀಸ್ ನೀಡಿದರೂ ಬಿಲ್ ಪಾವತಿ ಮಾಡುತ್ತಿಲ್ಲ ಎಂಬುದು ಬೆಸ್ಕಾಂ ಅಧಿಕಾರಿಗಳ ಆರೋಪವಾಗಿದೆ.
ಈ ಹಿಂದೆ ಗ್ರಾಮ ಪಂಚಾಯಿತಿಗಳು ಅತೀ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳುತ್ತಿದ್ದವು. ಪ್ರಕಟಣೆ ಹಾಗೂ ಪ್ರತೀ ತಿಂಗಳು ಬಿಲ್ ಕಳಿಸಿ ಎಚ್ಚರಿಸಿರುವ ಪರಿಣಾಮ ಕೆಲ ತಿಂಗಳ ಹಿಂದೆ ಎಲ್ಲಾ ಗ್ರಾಮ ಪಂಚಾಯಿತಿಗಳು ಬಿಲ್ ಪಾವತಿ ಮಾಡುತ್ತಿವೆ. ಗ್ರಾಮ ಪಂಚಾಯಿತಿಗಳಿಂದ ಹೆಚ್ಚಿನ ಬಿಲ್ ಬಾಕಿ ಇಲ್ಲ. ಜಿಲ್ಲಾಸ್ಪತ್ರೆ ಮಾತ್ರ ಗರಿಷ್ಠ ಬಿಲ್ ಬಾಕಿ ಉಳಿಸಿಕೊಂಡಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ
ಬಿಲ್ ಪಾವತಿಸುವಂತೆ ನೋಟೀಸ್ :
ಸಾಮಾನ್ಯವಾಗಿ ಜಿಲ್ಲಾಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಗ್ರಾಮೀಣ ಭಾಗದ ಜನರೇ ಬರುತ್ತಾರೆ. ವಿದ್ಯುತ್ ಕಡಿತಗೊಳಿಸಿದರೆ ಸಾರ್ವಜನಿಕರಿಗೆ ತೊಡುಕಾಗುತ್ತದೆ. ಆದ್ದರಿಂದ, ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಡಿಸೆಂಬರ್ ಅಂತ್ಯಕ್ಕೆ ವಿದ್ಯುತ್ ಪಾವತಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಇನ್ನೂ ಪಾವತಿಯಾಗಿಲ್ಲ. ಪಾವತಿ ಮಾಡದಿದ್ದರೆ ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು ಎನ್ನುತ್ತಾರೆ ಬೆಸ್ಕಾಂ ಉನ್ನತ ಅಧಿಕಾರಿ.
ಈ ಕುರಿತು ಈದಿನ ಡಾಟ್ ಕಾಮ್ ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಕರೆ ಮಾಡಲಾಗಿದ್ದು, ಜಿಲ್ಲಾ ಶಸ್ತ್ರಚಿಕಿತ್ಸಕರು ಕರೆ ಸ್ವೀಕರಿಸಲಿಲ್ಲ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.