- ಚೌಹಾಣ್ ಹೇಳಿಕೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ
- ವರಿಷ್ಠರು ಅನುಮತಿ ನೀಡಿದರೆ ದೂರು ದಾಖಲಿಸುತ್ತೇನೆ
ಮಾಜಿ ಸಚಿವ ಪ್ರಭು ಚೌಹಾಣ್ ಆರೋಪ ಮೋಸ ಮತ್ತು ಕಪಟದಿಂದ ಕೂಡಿದ್ದು, ಅವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಪ್ರತಿಕ್ರಿಯೆ ನೀಡಿರುವ ಅವರು, “ಮಂಡಲದ ಕಾರ್ಯಕಾರಣಿಯಲ್ಲಿ ಮಾತನಾಡುವ ಎಲ್ಲ ಮಾತು ಬಿಟ್ಟು ನನ್ನ ಮೇಲೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಇದರಿಂದ ಆಘಾತನಾಗಿದ್ದೇನೆ. ಹೇಳಿಕೊಳ್ಳಲಾಗದಷ್ಡು ಮನಸ್ಸಿಗೆ ನೋವಾಗಿದೆ. ನನ್ನ ಕುಟುಂಬ ಕೂಡಾ ವಿಚಲಿತವಾಗಿದೆ” ಎಂದಿದ್ದಾರೆ.
“ಒಂಭತ್ತು ವರ್ಷದ ಹಿಂದೆ ಇದೇ ರೀತಿ ಆರೋಪ ಮಾಡಿದ್ದರು. ನಮ್ಮ ಪಕ್ಷದಲ್ಲಿ ಈ ಎಲ್ಲ ಸಮಸ್ಯೆ ಬಗೆಹರಿಯುತ್ತವೆ. ತಪ್ಪು ತಿಳಿವಳಿಕೆ ಸರಿಯಾಗಬಹುದು ಎಂದು ಭಾವಿಸಿದ್ದೆ. ಆದರೆ ಇದು ತಂತ್ರ ಕುತಂತ್ರ ಮೋಸ ಕಪಟದಿಂದ ಕೂಡಿದೆ. ಪಕ್ಷದ ವರಿಷ್ಠರ ಗಮನಕ್ಕೆ ತಂದು ಮುಂದುವರಿಯುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದೇಶದ್ರೋಹಿಗಳ ಭದ್ರತೆಗೆ ನಿಲ್ಲುತ್ತಿರುವುದು ಅಧಿಕಾರದ ದುರುಪಯೋಗ: ಕಾಂಗ್ರೆಸ್ ವಿರುದ್ಧ ಯತ್ನಾಳ್ ಕಿಡಿ
“ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಸೇವೆ ನೋಡಿ ತಮ್ಮ ಮಂತ್ರಿಮಂಡಲದಲ್ಲಿ ಅವಕಾಶ ನೀಡಿದ್ದಾರೆ. ಮಂತ್ರಿ ಮಾಡುವ ಮುನ್ನ ನನ್ನ ಚರಿತ್ರೆ ಗಮನಿಸಿದ್ದಾರೆ. ನಾನು ಜನ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಆದರೆ ಈ ಆರೋಪ ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ” ಎಂದರು.
“ಚೌಹಾಣ್ ತಂತ್ರ ಕುತಂತ್ರದ ಆಟ ಆಡುತ್ತಿದ್ದಾರೆ. ನಮ್ಮ ನಾಯಕರು ಮಾಹಿತಿ ಪಡೆದುಕೊಂಡಿದ್ದಾರೆ. ನನ್ನ ಭಾವನೆ ಹೇಳಿಕೊಂಡಿದ್ದೇನೆ. ಪಕ್ಷದ ವೇದಿಕೆಯಲ್ಲಿ ಸತ್ಯಾಸತ್ಯತೆಯನ್ನು ವರಿಷ್ಠರು ಹೊರ ಹಾಕಲಿದ್ದಾರೆ. ನೂರು ಕೋಟಿ ಮಾನ ಹಾನಿ ಕೇಸ್ ಹಾಕಲು ನಿರ್ಧರಿಸಿದ್ದೇನೆ. ವರಿಷ್ಠರು ಅನುಮತಿ ನೀಡಿದರೆ ದೂರು ದಾಖಲಿಸುತ್ತೇನೆ” ಎಂದರು.