1924ರ ಡಿ.26ರಂದು ಮಹಾತ್ಮ ಗಾಂಧೀಜಿ ಅವರು ಜವಾಹರ್ ಲಾಲ್ ಅವರೊಂದಿಗೆ ಬೆಳಗಾವಿಗೆ ಬಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಬೃಹತ್ ಸಮಾವೇಶ ನಡೆಸಿದ್ದರು. ಮಹಾತ್ಮ ಗಾಂಧೀಜಿಯವರು ಎಐಸಿಸಿ ಅಧ್ಯಕ್ಷರಾಗಿ ಪಟ್ಟ ಏರಿದ ದಿನಕ್ಕೆ ಇಂದಿಗೆ 100 ವರ್ಷಗಳಾಗಿರುವ ನೆನಪಿನಲ್ಲಿ ಬೆಳಗಾವಿಯಲ್ಲಿ ಡಿಸೆಂಬರ್ 27ರಂದು ಗಾಂಧೀ ಭಾರತ್ ಸಮಾವೇಶ ನಡೆಸಲು ಪಕ್ಷದ ಅಧ್ಯಕ್ಷರು ಕರೆ ಕೊಟ್ಟಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಮಾಹಿತಿ ನೀಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಘಟಕಗಳ ಅಧ್ಯಕ್ಷರು, ಕಾರ್ಯಕರ್ತರು ಸೇರಿದಂತೆ ಪ್ರತೀ ಕ್ಷೇತ್ರದಿಂದ ಕನಿಷ್ಠ ನೂರು ಜನ ಭಾಗಿಯಾಗಬೇಕಾಗಿ ಇಂದಿನ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಿ.ಟಿ ರವಿಗೆ ಶಿಕ್ಷೆಯಾಗಲಿ :
ರಾಜಕೀಯದಲ್ಲಿ ಹಲವು ವರ್ಷಗಳ ಅನುಭವವುಳ್ಳ ಸಿ.ಟಿ.ರವಿಯವರ ತಾಳ್ಮೆ ಕಳೆದುಕೊಂಡು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮತ್ತು ಇಡೀ ಸ್ತ್ರೀಕುಲಕ್ಕೆ ಅಪಮಾನ ಮಾಡಿದ್ದಾರೆ. ಅನುಭವಿಗಳಾಗಿ ಈ ರೀತಿಯ ವರ್ತನೆ ಅಕ್ಷಮ್ಯ. ಅವರು ದೇಶದ ಮಹಿಳೆಯರನ್ನು ಬೇಶರತ್ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗಟ್ಟಿತನದ ಮಹಿಳೆಯಾದ ಕಾರಣ ಅಪಮಾನವನ್ನು ಸಹಿಸಿಕೊಂಡಿದ್ದಾರೆ. ಅವರ ನೋವಿನೊಂದಿಗೆ ನಾವೆಲ್ಲರೂ ಇರುತ್ತೇವೆ. ಬೇರೆಯವರಿಗೆ ಈ ರೀತಿ ಆಗಬಾರದು ಎಂಬ ಕಾರಣಕ್ಕೆ ಅವರು ದೂರು ನೀಡಿದ್ದಾರೆ. ದೇಶ ಮತ್ತು ರಾಜ್ಯವಷ್ಟೇ ಅಲ್ಲದೆ ಒಟ್ಟಾರೆ ಮಹಿಳಾ ಸಮೂಹಕ್ಕೆ ಸಿ ಟಿ ರವಿ ಅವಮಾನಿಸಿದ್ದಾರೆ. ಇದನ್ನ ಯಾರೊಬ್ಬರು ಕ್ಷಮಿಸುವುದಿಲ್ಲ. ಇಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ವಿರುದ್ಧ ಅಮಿತ್ ಶಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದು ಬಿಜೆಪಿಯವರ ಒಳಮನಸ್ಸು ಬಹಿರಂಗವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವರ ಧ್ವಂಧ್ವ ನಿಲುವುಗಳನ್ನು ತಾಳುತ್ತಾರೆ. ಹೇಳಿಕೆ ಕೊಟ್ಟಿದ್ದಾರೆ. ಅಂಬೇಡ್ಕರ್ ಅವರ ಕೊಡುಗೆಯಿಂದ ಇಂದು ಅವರು ದೇಶದ ಗೃಹ ಸಚಿವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇದನ್ನು ಕ್ಷಮಿಸುವುದಿಲ್ಲ. ಇದಕ್ಕಾಗಿ ಪಕ್ಷದ ವತಿಯಿಂದ ದೊಡ್ಡ ಹೋರಾಟವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಬಿಸಿಯೂಟ ನೌಕರರ ವೇತನ ಹೆಚ್ಚಿಸದ ಕೇಂದ್ರದ ವಿರುದ್ಧ ಪ್ರತಿಭಟನೆ
ಜಿಲ್ಲಾ ಕಾಂಗ್ರೆಸ್ ಭವನದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಭವನಕ್ಕಾಗಿ ಸ್ಥಳ ಗುರುತಿಸಲಾಗಿದೆ. ವರಿಷ್ಠರ ಗಮನಕ್ಕೂ ತರಲಾಗಿದೆ. ಈ ಕುರಿತು ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ 1-2 ತಿಂಗಳೊಳಗೆ ಭೂಮಿಪೂಜೆ ನೆರವೇರಲಿದ್ದು, 3 ವರ್ಷಗಳೊಳಗಾಗಿ ಕಟ್ಟಡ ಲೋಕಾರ್ಪಣೆ ಆಗಲಿದೆ ಎಂದು ಆಶ್ವಾಸನೆ ವ್ಯಕ್ತಪಡಿಸಿದರು.