ಬೀದರ್ ತಾಲೂಕಿನ ಆಣದೂರ ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ 138 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಬುದ್ಧ ಬೆಳಕು ಟ್ರಸ್ಟ್, ಸಂವಿಧಾನ ಜಾಗೃತಿ ವೇದಿಕೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಯುವ ಸಂಘದ ಸಂಯುಕ್ತಾಶ್ರಯದಲ್ಲಿ 75ನೇ ಸಂವಿಧಾನ ಅಮೃತ ಮಹೋತ್ಸವ, ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಸರಳ ಸಾಮೂಹಿಕ ವಿವಾಹ ಮತ್ತು ಜಿಲ್ಲಾ ಮಟ್ಟದ ಜಾನಪದ ಸಂಭ್ರಮ ಆಯೋಜನೆ ಮಾಡಲಾಗಿತ್ತು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಂವಿಧಾನ ಪೀಠಿಕೆ ಓದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಇತ್ತೀಚೆಗೆ ಆಡಂಬರದ ಮದುವೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿಷ್ಠೆಗಾಗಿ ಒಬ್ಬರಿಗಿಂತ ಮತ್ತೊಬ್ಬರು ಅದ್ಧೂರಿಯಾಗಿ ಮದುವೆ ಆಯೋಜಿಸಲು ದುಂದು ವೆಚ್ಚ ಮಾಡುವ ಪ್ರವೃತಿ ಬೆಳೆಯುತ್ತಿದೆ. ಆದರೆ ಇಂದಿನ ಸರಳ ಸಾಮೂಹಿಕ ವಿವಾಹ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆʼ ಎಂದರು.
ʼಸಮಾಜದಲ್ಲಿ ಪ್ರೀತಿ, ಭಾತೃತ್ವ , ಸಾಮರಸ್ಯ ಹಾಗೂ ಸಮಾನತೆ ಬಿತ್ತಿದ ಶ್ರೇಯಸ್ಸು ಮಹಾತ್ಮ ಗೌತಮ ಬುದ್ಧನಿಗೆ ಸಲ್ಲಬೇಕು. ಬುದ್ಧನ ಮಾರ್ಗ, ಬಸವಣ್ಣನವರ ಸನ್ಮಾರ್ಗ, ಬಾಬಾ ಸಾಹೇಬ್ ಅಂಬೇಡ್ಕರವರ ರಾಜ ಮಾರ್ಗ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜೀವನ ಮಾರ್ಗ ನಮಗೆ ಆದರ್ಶವಾಗಬೇಕು. ದಾಂಪತ್ಯಕ್ಕೆ ಕಾಲಿಟ್ಟ ಎಲ್ಲ ಜೋಡಿಗಳು ಪರಸ್ಪರ ಅರ್ಥೈಸಿಕೊಂಡು ಕೂಡಿ ಬಾಳಿದರೆ ಬದುಕು ಸುಖಮಯವಾಗುತ್ತದೆʼ ಎಂದು ನುಡಿದರು.
ಸಮಾರಂಭದ ಸಾನಿಧ್ಯ ವಹಿಸಿದ ಭಂತೆ ಧಮ್ಮಾನಂದ ಮಹಾಥೆರೋ ಅವರು ಮದುವೆ ವಿಧಿ, ವಿಧಾನಗಳು ನಡೆಸಿಕೊಟ್ಟರು. ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೆ ಸಂದರ್ಭದಲ್ಲಿನಡೆದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ಶಂಕರ ಚೊಂಡಿ, ದೇವಿದಾಸ ಚಿಮಕೋಡೆ ಹಾಗೂ ಸಂಗಡಿಗರು ಜಾನಪದ ಗೀತೆ ಹಾಡಿ ಸಭಿಕರನ್ನು ರಂಜಿಸಿದರು.
ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ, ಯುವ ಉದ್ಯಮಿ ದೀಪಕ ದಿಲ್ಲೆ, ನಗರ ಸಭೆ ನಾಮನಿರ್ದೇಶನ ಸದಸ್ಯ ಸೂರ್ಯಕಾಂತ ಸಾಧೂರೆ ಅವರಿಗೆ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕಾರಣದಲ್ಲಿ ಭ್ರಷ್ಟಾಚಾರ ಎಂಬುದು ಗಂಭೀರ ವಿಷಯವೇ?
ಜ್ಞಾನ ಉದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕಾಶಿನಾಥ ಚೆಲ್ವಾ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ಕೊಳಾರ ಗ್ರಾಮ ಪಂಚಾಯತ ಸದಸ್ಯ ವಿಜಯಕುಮಾರ ಭಾವಿಕಟ್ಟಿ, ಸಂತೋಷ ಬಕ್ಕಚೋಡಿ, ಬೌದ್ಧ ಆಚಾರ್ಯ ಶಂಭುಲಿಂಗ ಬಾನೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬುದ್ಧ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಗೋರನಾಳಕರ್ ಹಾಗೂ ಶರಣು ಫುಲೆ, ರಮೇಶ ಮಾಲೆ, ನೀಲಕಂಠ ಕಾಂಬಳೆ, ಗೌತಮ ಮುತ್ತಂಗಿಕರ್, ಕೃಷ್ಣ ಭೂತಾಳೆ, ಮಹಾಲಿಂಗ ಸಕ್ಪಾಲ್, ಅವಿನಾಶ್ ರಂಜೋಳ, ಅರುಣಕುಮಾರ, ಪೀಟರ್ ಇಸ್ಲಾಂಪೂರ ಉಪಸ್ಥಿತರಿದ್ದರು. ಅಮರ ಅಲ್ಲಾಪೂರ ಸ್ವಾಗತಿಸಿದರು. ಸಂವಿಧಾನ ಜಾಗೃತಿ ವೇದಿಕೆ ಸದಸ್ಯ ಪ್ರಕಾಶ ರಾವಣ ವಂದಿಸಿದರು.