ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 141 ಕೊಲೆ ಪ್ರಕರಣಗಳು ನಡೆದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನಪರಿಷತ್ ಸದಸ್ಯ ಸುನಿಲ್ ವಲ್ಯಾಪುರೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ʼ2022ರಲ್ಲಿ 56 ಕೊಲೆ ಪ್ರಕರಣಗಳ ಪೈಕಿ 44 ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. 2023ರಲ್ಲಿ 55 ಪ್ರಕರಣಗಳಲ್ಲಿ 40 ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 30 ಕೊಲೆ ಪ್ರಕರಣಗಳು ನಡೆದಿದ್ದು, 23 ಪ್ರಕರಣಗಳ ಆರೋಪಿತರನ್ನು ಬಂಧಿಸಲಾಗಿದೆʼ ಎಂದು ತಿಳಿಸಿದರು.
ವೈಯಕ್ತಿಕ ದ್ವೇಷ, ಆಸ್ತಿ ವ್ಯಾಜ್ಯ ಮತ್ತು ಅನೈತಿಕ ಸಂಬಂಧಗಳ ಹಿನ್ನಲೆಯಲ್ಲಿ ಕೊಲೆಗಳಾಗಿವೆ. ಕೊಲೆ ಆರೋಪಿಗಳನ್ನು ಸಕಾಲದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೂಕ್ತ ಕಾನೂನಿನ ಅಡಿ ಕ್ರಮ ಜರುಗಿಸಲಾಗುತ್ತಿದೆʼ ಎಂದಿದ್ದಾರೆ.
ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 25 ಕೊಲೆ ಪ್ರಕರಣಗಳು ನಡೆದಿವೆ. ಅತೀ ಹೆಚ್ಚು ಕೊಲೆ ಪ್ರಕರಣಗಳು ಇದೇ ತಾಲ್ಲೂಕಿನಲ್ಲಿ ನಡೆದಿವೆ. ನಂತರದ ಸ್ಥಾನದಲ್ಲಿ ಚಿಂಚೋಳಿ 24, ಆಳಂದ 19, ಚಿತ್ತಾಪುರ 16, ಸೇಡಂ 16, ಜೇವರ್ಗಿ 12, ಕಾಳಗಿ 10, ಕಮಲಾಪುರ 80, ಯಡ್ರಾಮಿ 6 ಹಾಗೂ ಶಹಾಬಾದ್ 4 ಕೊಲೆ ಪ್ರಕರಣಗಳು ನಡೆದಿವೆ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ʼಸೇವಂತಿಗೆʼ ಕೃಷಿಯಲ್ಲಿ ಯಶಸ್ಸು ಕಂಡ ಯುವ ರೈತ : ತಿಂಗಳಿಗೆ ಒಂದು ಲಕ್ಷ ಆದಾಯ!
ಮೂರು ವರ್ಷ ಅವಧಿಯಲ್ಲಿ 416 ಮಟ್ಕಾ ಹಾಗೂ 18 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿವೆ. ಒಟ್ಟು 259 ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ತಿಳಿಸಿದ್ದಾರೆ.