ಬೀದರ್ ಗುಡಿಸಲು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಜಿಲ್ಲೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ -ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ 15 ಸಾವಿರ ಮನೆಗಳು ಮಂಜೂರಾಗಿವೆ ಎಂದು ಬೀದರ ಸಂಸದ ಸಾಗರ ಈಶ್ವರ ಖಂಡ್ರೆ ತಿಳಿಸಿದರು.
ಸೋಮವಾರ ಭಾಲ್ಕಿಯ ಸಂಸದರ ಕಚೇರಿ ಆವರಣದಲ್ಲಿ 2024-25ನೇ ಸಾಲಿನಲ್ಲಿ ಭಾಲ್ಕಿ ತಾಲ್ಲೂಕಿನ ಗ್ರಾಮೀಣ ಭಾಗದ 665 ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಮಂಜೂರಾದ ಪಿಎಂಎವೈ-ಜಿ ಮನೆಗಳ ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ವಿತರಣೆ ಮಾಡಿ ಮಾತನಾಡಿದರು.
ಪಿಎಂಎವೈ-ಜಿ ಅಡಿಯಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ₹1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹1.75 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಮನೆ ಮಂಜೂರಾತಿ ಸೇರಿದಂತೆ ಯಾವುದಕ್ಕೂ ಮಧ್ಯವರ್ತಿಗಳ ನಂಬಬೇಡಿ, ಮನೆಯ ಆರ್ಥಿಕ ನೆರವು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಆಗಲಿದೆ. ಮೊದಲ ಕಂತು ಜಮೆಯಾದ ಬಳಿಕ ಮನೆ ಕಾಮಗಾರಿ ಆರಂಭಿಸತಕ್ಕದ್ದು ಎಂದರು.
ಭಾಲ್ಕಿ ತಾಲ್ಲೂಕಿನ ಗ್ರಾಮಾಂತರ ವ್ಯಾಪ್ತಿಗೆ ಒಟ್ಟು 3 ಸಾವಿರ ಮನೆ ಮಂಜೂರಾಗಿದ್ದು, ಈ ಪೈಕಿ ಮೊದಲ ಹಂತದ 665 ಫಲಾನುಭವಿಗಳಿಗೆ ಇಂದು ತಿಳುವಳಿಕೆ ಪತ್ರ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಇನ್ನೂ ವಸತಿ ರಹಿತರ ಗುರುತಿಸುವಿಕೆ ಕಾರ್ಯ ನಡೆಯುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗುವುದುʼ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸ್ ಟಿಕೆಟ್ ದರ ಹೆಚ್ಚಳ ಖಂಡಿಸಿ ಎಬಿವಿಪಿ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಭಾಲ್ಕಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹಣಮಂತ ಚೌವ್ಹಾಣ, ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ್ ವಂಕೆ, ಕಾಂಗ್ರೆಸ್ ಮುಖಂಡ ವಿಲಾಸರಾವ್ ಮೋರೆ, ಅಂಬಾದಾಸ್ ಕೋರೆ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಫಲಾನುಭವಿಗಳು ಭಾಗವಹಿಸಿದ್ದರು.