ಮೂರು ವಾರಗಳ ತಡವಾಗಿ ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಿವೆ. ಆದರೂ, ರಾಜ್ಯದಲ್ಲಿ ವಾಡಿಕೆಯ ಮಳೆಯಾಗುತ್ತಿಲ್ಲ. ಹಲವೆಡೆ ಇನ್ನೂ ಮಳೆ ಹನಿಗಳು ಭೂಮಿಯನ್ನು ಸ್ಪರ್ಷಿಸಿಲ್ಲ. ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ತಿಳಿದುಬಂದಿದೆ.
ಈ 16 ಜಿಲ್ಲೆಗಳಲ್ಲಿ ಹಲವು ಗ್ರಾಮಗಳು ಮತ್ತು ನಗರಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ಕೆಲವು ವಾರಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಾರ, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಸಂಗ್ರಹಣೆ 149.9 ಟಿಎಂಸಿ ಅಡಿ (ಒಟ್ಟು ಸಾಮರ್ಥ್ಯ 865.20 ಟಿಎಂಸಿ ಅಡಿ) ಮಾತ್ರವೇ ಇದೆ. 2022 ರಲ್ಲಿ, ಇದೇ ಅವಧಿಯಲ್ಲಿ ಜಲಾಶಯಗಳಲ್ಲಿನ ಸಂಗ್ರಹವು 283.86 ಟಿಎಂಸಿ ಅಡಿ ಇತ್ತು.
31 ಜಿಲ್ಲೆಗಳ ಪೈಕಿ ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಹೊರತುಪಡಿಸಿ, ಹೆಚ್ಚಿನ ಜಿಲ್ಲೆಗಳು ಜೂನ್ 1 ರಿಂದ 27 ರವರೆಗಿನ ಅವಧಿಗೆ ಮಳೆ ಕೊರತೆ ಎದುರಿಸಿವೆ. ಇದು ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲ, ಕುಡಿಯುವ ನೀರಿನ ಪೂರೈಕೆಗೂ ತೊಂದರೆಯಾಗಿದೆ.
“ಮುಂದಿನ ಎರಡು ತಿಂಗಳವರೆಗೆ ಕುಡಿಯುವ ನೀರಿನ ಪೂರೈಕೆಗಾಗಿ ತಾತ್ಕಾಲಿಕ ಯೋಜನೆಗಳನ್ನು ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ನಾವು ಹೇಳಿದ್ದೇವೆ. ನೀರಿನ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಸೂಚಿಸಿದ್ದೇವೆ. ಇದಕ್ಕಾಗಿ ಅಂದಾಜು ಪಟ್ಟಿಯನ್ನು ತಯಾರಿಸುವಂತೆಯೂ ಹೇಳಿದ್ದೇವೆ” ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ಕೆ ಅತೀಕ್ ತಿಳಿಸಿದ್ದಾರೆ.