ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪುರಸಭೆಯಲ್ಲಿ ಸುಮಾರು 15 ವರ್ಷಗಳಿಂದ ಕೆಲಸ ಮಾಡಿರುವ 16 ಜನ ಪೌರಕಾರ್ಮಿಕರನ್ನು ಖಾಲಿಯಿರುವ ಹುದ್ದೆಗಳಿಗೆ ಕೂಡಲೇ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದವರೆಗೆ ತೆರಳಿ ಸಮಾವೇಶಗೊಂಡಿತ್ತು. ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು, ಬಳಿಕ ಸಿಎಂ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಪೌರಕಾರ್ಮಿಕರು ಸುಮಾರು 15 ವರ್ಷಗಳಿಂದ ಜೇವರ್ಗಿ ಪಟ್ಟಣವನ್ನು ಪ್ರತಿದಿನ ಬೆಳಗಿನ ಜಾವ 5 ಗಂಟೆಗೆ ಎದ್ದು ಪಟ್ಟಣದ 23 ವಾರ್ಡಗಳ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದರು.
ʼಜೇವರ್ಗಿ ಪುರಸಭೆ ಅಧಿಕಾರಿಗಳು ಕಾರ್ಮಿಕರನ್ನು ಮನ ಬಂದಂತೆ ದುಡಿಸಿಕೊಂಡು ತಿಂಗಳಿಗೆ ಎರಡು-ಮೂರು ಸಾವಿರ ಕೈ ಚೀಟಿ ಮುಖಾಂತರ ಸಂಬಳ ನೀಡಿದ್ದಾರೆ. ದಲಿತ ಕುಟುಂಬದಿಂದ ಬಂದ ಪೌರಕಾರ್ಮಿಕರು ತಮ್ಮ ಬಡತನದ ಬೇಗುದಿಗೆ ಅಧಿಕಾರಿಗಳು ಕೊಟ್ಟಷ್ಟು ಸಂಬಳ ಪಡೆದು ಉಪಜೀವನ ನಡೆಸಿದ್ದರು. ಬಳಿಕ ಏಕಾಏಕಿ 17 ಜನ ಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದರುʼ ಎಂದು ಆರೋಪಿಸಿದರು.
ʼಜೇವರ್ಗಿ ಪುರಸಭೆಯಲ್ಲಿ ಕೆಲಸ ನಿರ್ವಹಿಸಿದ 16 ಜನ ಪೌರಕಾರ್ಮಿಕರನ್ನು ತಕ್ಷಣ ನೇಮಕಾತಿ ಮಾಡಿಕೊಳ್ಳಬೇಕು. ಪೌರಕಾರ್ಮಿಕರ ದಾಖಲಾತಿಗಳನ್ನು ನಾಶ ಮಾಡಿದ ಅಧಿಕಾರಿಗಳನ್ನು ತಕ್ಷಣವೇ ಅಮಾನತ್ತುಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಬೇಕು. ಪುರಸಭೆಯಲ್ಲಿ ಸರಕಾರದ ನಿಯಮಗಳನ್ನು ಮೀರಿ ಹಲವು ವರ್ಷಗಳಿಂದ ಸೇವೆಯಲ್ಲಿರುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆಗೊಳಿಸಬೇಕುʼ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಇದ್ದರೆ ಇರಬೇಕು ಇಂಥ ಸರ್ಕಾರಿ ಶಾಲೆ : ಹಳ್ಳಿ ಶಾಲೆಗೆ ಬಣ್ಣದ ಚಿತ್ತಾರ!
ಜೇವರ್ಗಿ ಮಾಜಿ ಶಾಸಕ ದೊಡ್ಡಗೌಡ ಪಾಟೀಲ್ ನರಿಬೋಳ ಸೇರಿದಂತೆ ಪ್ರಮುಖರಾದ ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಮರೇಪ್ಪ ಬಡಿಗೇರ, ಭೀಮರಾಯ ನಗನೂರ್, ಪುಂಡಲಿಕ ಗಾಯಕವಾಡ, ಮಹೇಶ್ ರಾಠೋಡ, ಮಲ್ಲಣ್ಣ ಕೊಡಚಿ, ಶ್ರೀಹರಿ ಕರಕಿಹಳ್ಳಿ, ಸಿದ್ರಾಮ್ ಕಟ್ಟಿ, ದವಲಪ್ಪ ಮದನ, ಸಿದ್ದು ಕೆರೂರ, ಗುಂಡಪ್ಪ ಜಡಗಿ, ಶಿವಶರಣಪ್ಪ ಮಾರಡಗಿ, ಮಹೇಶ್ ಕೋಕಿಲೆ, ಪರಮಾನಂದ ಯಲಗೋಡ, ರವಿ ಕುರಳಗೇರಾ, ಅಬ್ದುಲ್ ಘನಿ, ಶಿವಶರಣಪ್ಪ ಮಂದೇವಾಲ, ಪ್ರಭಾಕರ್ ಸಾಗರ, ಯಮನೇಶ ಅಂಕಲಗಿ, ಶಿವಕುಮಾರ್ ಗೋಲಾ, ಸಿದ್ರಾಮ ಯಳಸಂಗಿ, ವಿಜಯಕುಮಾರ ಧರೇನ, ಶ್ರೀಮಂತ ಕೀಲೆದಾರ್, ಭೀಮರಾಯ ಬಳ್ಳಬಟ್ಟಿ, ಸಿದ್ದು ಶರ್ಮಾ, ಗುರುಲಿಂಗಪ್ಪ ಗೆವನಳ್ಳಿ, ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.