ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗಿನ ಉಪಹಾರ ಸೇವಿಸಿ 17 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಲವು ದಿನಗಳಿಂದ ಊಟದ ಸಮಸ್ಯೆ ಇದೆ ಎಂಬ ಆರೋಪಗಳಿವೆ. ವಿದ್ಯಾರ್ಥಿಗಳಿಗೆ ಸರಿಯಾದ ಉಪಹಾರ ನೀಡಿಲ್ಲ, ಕುಡಿಯಲು ಕಲುಷಿತ ನೀರು ಕೊಡಲಾಗಿದ್ದು, ಆ ಕಾರಣಕ್ಕೆ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎಂದು ಪಾಲಕರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
“ಅಡುಗೆ ಸಹಾಯಕರು ಆಹಾರ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛತೆ ಮಾಡುವುದಿಲ್ಲ. ಬಾಲ್ ಹುಳು, ನುಸಿ ಸೇರಿದಂತೆ ಇನ್ನಿತರ ಕ್ರಿಮಿಗಳು ಆಹಾರದಲ್ಲಿರುತ್ತವೆ. ಅಡುಗೆ ತಯಾರಿಸುವ ಕೋಣೆಯ ಸುತ್ತಲೂ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಕಲುಷಿತ ನೀರು ಹಾಗೂ ಕಳಪೆ ಗುಣಮಟ್ಟದ ಆಹಾರದಿಂದ 17 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ” ಎಂದು ಆರೋಪಿಸಲಾಗಿದೆ.
“ವಾಂತಿ, ಭೇದಿ, ಹೊಟ್ಟೆ ನೋವು, ಎದೆ ಉರಿ ಹಾಗೂ ಕೆಲವು ವಿದ್ಯಾರ್ಥಿಗಳಿಗೆ ದೇಹದ ಅಲರ್ಜಿಯಾಗಿದೆ. ಅಡುಗೆ ಸಹಾಯಕರು ಮಾತ್ರ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಪ್ರಾಚಾರ್ಯರು ಹಾಗೂ ವಸತಿ ನಿಲಯದ ವಾರ್ಡನ್ ಸಮಸ್ಯೆಗಳನ್ನು ಆಲಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಬರುವುದಿಲ್ಲ” ಎಂದು ಪೋಷಕರು ದೂರಿದ್ದಾರೆ.
ಆಸ್ಪತ್ರೆಗೆ ಹಾಗೂ ವಸತಿ ನಿಲಯಕ್ಕೆ ತಹಶೀಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪಿಎಸ್ಐ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಅಡುಗೆ ಸಹಾಯಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ನಡೆಸುತ್ತವೆಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ.
ವರದಿ : ಸಿಟಿಜನ್ ಜರ್ನಲಿಸ್ಟ್ ಮಿಲಿಂದ್ ಸಾಗರ್