ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಜಲಾಶಯವೂ ತುಂಬಿದ್ದು, ನದಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ. ಪರಿಣಾಮ, ಕೃಷ್ಣಾ ನದಿ ತೀರದ ಹಳ್ಳಿಗಳು, ಜಮೀನುಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ತೀರದ ಕೆಲ ಹಳ್ಳಿಗಳ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗಿವೆ. ತಾಲೂಕಿನ ಮುತ್ತೂರು, ನಡುಗಡ್ಡೆ ಗ್ರಾಮಗಳು ಜಲಾವೃತಗೊಂಡಿವೆ. ಹೀಗಾಗಿ, ನಡುಗಡ್ಡೆ ಗ್ರಾಮದ 40 ಕುಟುಂಬಗಳ ಪೈಕಿ ಎಂಟು ಕುಟುಂಬಗಳನ್ನು ಮಾತ್ರವೇ ಸ್ಥಳಾಂತರಿಸಲಾಗಿದೆ. ಆದರೆ, ಉಳಿದ 32 ಕುಟುಂಬಗಳ ತಮ್ಮೂರು ಬಿಟ್ಟು ಬರುಲು ನಿರಾಕರಿಸುತ್ತಿದ್ದಾರೆ.
ನಡುಗಡ್ಡೆ ಜಾಲಾವೃತಗೊಂಡಿರುವುದರಿಂದ ಬೋಟ್‌ಗಳ ಮೂಲಕ ಕೇವಲ 8 ಕುಟುಂಬಗಳು, 38 ಜನರು, 80 ಜಾನುವಾರಗಳು ಶುಕ್ರವಾರ ಸ್ಥಳಾಂತರ ಮಾಡಲಾಗಿದೆ. ಉಳಿದ 32 ಕುಟುಂಬಗಳ 180 ಜನರು, 120 ಜಾನುವಾರುಗಳು ಗ್ರಾಮದಲ್ಲಿಯೇ ಉಳಿದಿವೆ ಎಂದು ವರದಿಯಾಗಿದೆ.
ಸ್ಥಳಾಂತರಗೊಂಡಿರುವ ಜನರೂ ಕೂಡ ಸ್ಥಳೀಯ ಆಡಳಿತ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಳೆಯಾದಾಗಲೆಲ್ಲ ನಮ್ಮನ್ನು ಸ್ಥಳಾಂತರ ಮಾಡಲಾಗುತ್ತದೆ. ಜೀವ ಭಯದಿಂದ ನಾವು ಹೋಗುತ್ತೇವೆ. ಆದರೆ, ಸ್ಥಳಾಂತರಗೊಂಡು ನೀರು ಕಡಿಮೆಯಾದ ಬಳಿಕ ಮರಳು ಊರಿಗೆ ಬರಲು ಕನಿಷ್ಠ 15,000 ಖರ್ಚಾಗುತ್ತದೆ. ಈ ವೆಚ್ಚವನ್ನೂ ನಾವೇ ಭರಿಸಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳಾಂತರಗೊಂಡಿರುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.