2023-24ನೇ ಶಿಕ್ಷಣಿಕ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 181 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ತಿಳಿಸಿದೆ.
ಇಲಾಖೆಯು ಕಳೆದ ಅಕ್ಟೋಬರ್ 26 ರಿಂದ ನವೆಂಬರ್ 9 ರವರೆಗೆ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿಯನ್ನು ನಡೆಸಿದೆ. ಶಾಲೆಯಿಂದ ಹೊರಗೆ ಉಳಿದ 1ರಿಂದ 10ನೇ ತರಗತಿ ಮಕ್ಕಳನ್ನು ಗುರುತಿಸಲು ಶಾಲಾ, ಕ್ಲಸ್ಟರ್, ಜಿಲ್ಲಾ ಮಟ್ಟದಲ್ಲಿ ಈ ಗಣತಿ ನಡೆದಿದೆ. ಇದೀಗ, ಗಣತಿಯ ವರದಿ ಬಿಡುಗಡೆಯಾಗಿದ್ದು, ಇಲ್ಲೆಯಲ್ಲಿ 181 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ ಎಂದು ತಿಳಿಸಿದೆ.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದವರ ಪೈಕಿ ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿಯೇ ಹೆಚ್ಚು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ತಾಲೂಕಿನಲ್ಲಿ 51 ಮಕ್ಕಳು ಶಾಲೆಯಿಂದ ದೂರವಿದ್ದಾರೆ. ಇನ್ನು, ಗೌರಿಬಿದನೂರು, ಗುಡಿಬಂಡೆ, ಚಿಂತಾಮಣಿ ತಾಲೂಕಿನಲ್ಲಿ ಅನುಕ್ರಮವಾಗಿ 40, 37, 29 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಬಾಗೇಪಲ್ಲಿ ಮತ್ತು ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 24 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂದು ವರದಿ ಹೇಳಿದೆ
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗಿರುವ 181 ಮಕ್ಕಳಲ್ಲಿ 12 ಮಕ್ಕಳನ್ನು ಶಾಲೆಗೆ ಮರಳಿ ಕರೆತರಲಾಗಿದೆ. ಅವರಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 8 ಚಿಂತಾಮಣಿಯಲ್ಲಿ 3 ಹಾಗೂ ಶಿಡ್ಲಘಟ್ಟದಲ್ಲಿ 1 ವಿದ್ಯಾರ್ಥಿ ಶಾಲೆಗೆ ಮರಳಿದ್ದಾರೆ.
“ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 181 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಅವರಲ್ಲಿ 12 ಮಕ್ಕಳನ್ನು ಶಾಲೆಗೆ ಕರೆತರಲಾಗಿದೆ. ಉಳದಿ 169 ಮಕ್ಕಳನ್ನೂ ಶಾಲೆಗೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಕುಟುಂಬಗಳಲ್ಲಿ ಏನಾದರೂ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆ ಇದ್ದರೆ ಗುರುತಿಸಿ ಅವರನ್ನು ಹಾಸ್ಟಲ್‌ಗೆ ಸೇರಿಸುವ ವ್ಯವಸ್ಥೆ ಮಾಡಲಾಗುತ್ತದೆ” ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೈಲಾಂಜನಪ್ಪ ಹೇಳಿದ್ದಾರೆ.