ಚಿಕ್ಕಬಳ್ಳಾಪುರ ಜಿಲ್ಲೆಗೆ ಕೃಷ್ಣಾ ನದಿ ನೀರು, ಕೈಗಾರಿಕೆ, ಶಿಕ್ಷಣ, ಉದ್ಯೋಗ ಇತ್ಯಾದಿ ಹಕ್ಕೊತ್ತಾಯಗಳ ಧ್ಯೇಯದೊಂದಿಗೆ ಬಾಗೇಪಲ್ಲಿಯಲ್ಲಿ ನ.21, 22ರಂದು ಆಯೋಜಿಸಿರುವ ಸಿಪಿಐಎಂ 18ನೇ ಜಿಲ್ಲಾ ಸಮ್ಮೇಳನದ ಕರಪತ್ರಗಳನ್ನು ಸಿಪಿಐಎಂ ಪದಾಧಿಕಾರಿಗಳು ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದಲ್ಲಿ ಭಾನುವಾರ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿ ವೆಂಕಟಪ್ಪ, ಸಿಪಿಐಎಂ ಕಳೆದ 70 ವರ್ಷಗಳಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಚಳುವಳಿ, ಹೋರಾಟಗಳನ್ನು ನಡೆಸುತ್ತಾ ದುಡಿಯುವ ವರ್ಗಗಳ ಪಕ್ಷವಾಗಿದೆ. ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ರೈತರ ಬೆಳೆಗಳು ಕಮರಿಹೋಗಿವೆ. ರೈತರು ದಿವಾಳಿಯಾಗುವ ಸ್ಥಿತಿ ನಿರ್ಮಾಣವಾಗಿದ್ದು, ಈ ಭಾಗದ ಜನರ ಕೃಷಿ ಮತ್ತು ಬದುಕಿಗೆ ಕೃಷ್ಣಾ ನದಿ ನೀರು ಹರಿಸಿ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಜನಾಂದೋಲನ ನಡೆಸುವ ಮೂಲಕ ಸರ್ಕಾರದ ಕಣ್ಣು ತೆರೆಸಬೇಕಿದೆ ಎಂದು ಕರೆ ನೀಡಿದರು.
ಮತ್ತೊಂದೆಡೆ ತಾಲ್ಲೂಕಿನಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಕೂಲಿಕಾರರು ಮತ್ತು ಯುವಜನರು ಹಳ್ಳಿಗಳಲ್ಲಿ ಜೀವನೋಪಾಯದ ಅವಕಾಶಗಳಿಲ್ಲದೆ ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗಾಧಾರಿತ ಕೈಗಾರಿಕೆಗಳ ಸ್ಥಾಪನೆ ಅತ್ಯಗತ್ಯವಾಗಿದೆ ಎಂದು ಒತ್ತಾಯಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಸಿಪಿಐಎಂ 18ನೇ ಜಿಲ್ಲಾ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದ್ದು, ಸಮ್ಮೇಳನದಲ್ಲಿ ರೈತರು, ಪ್ರಗತಿಪರ ಚಿಂತಕರು, ಬುದ್ಧಿ ಜೀವಿಗಳು, ಕೃಷಿ ಕೂಲಿ ಕಾರ್ಮಿಕರು, ವಿಧ್ಯಾರ್ಥಿಗಳು, ವಿವಿಧ ಪ್ರಗತಿಪರ ಸಂಘಟನೆಗಳು, ಹಿರಿಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಣ, ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ರಾಷ್ಟ್ರವನ್ನು ತಲ್ಲಣಗೊಳ್ಳಿಸಿರುವ ಭಯೋತ್ಪಾದನೆ, ಕೋಮವಾದ, ಭ್ರಷ್ಟಾಚಾರ, ಯುವಕರ ನಿರುದ್ಯೋಗ, ಬಡತನ ಸೇರಿದಂತೆ ಇನ್ನೂ ಹಲವಾರು ಪ್ರಮುಖ ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಚರ್ಚಾಗೋಷ್ಠಿಗಳು ಈ ಸಮ್ಮೇಳನದಲ್ಲಿ ಜರುಗಲಿವೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಕಾಂ. ಬಿ.ವಿ. ರಾಘವುಲು, ಸಿಪಿಐ(ಎಂ) ಪೊಲಿಟಿಕಲ್ ಬ್ಯೂರೋ ಸದಸ್ಯರು, ಡಾ. ಅನಿಲ್ ಕುಮಾರ್,
ಕಾಂ.ಯು.ಬಸವರಾಜು, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಗಳು, ಕಾಂ ಕೆ.ಎನ್.ಉಮೇಶ್, ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಕಾಂ.ಜಿ.ಸಿ.ಬಯ್ಯಾರೆಡ್ಡಿ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು, ಕಾಂ. ಎಂ.ಪಿ. ಮುನಿವೆಂಕಟಪ್ಪ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕಾಂ. ಜಯರಾಮರೆಡ್ಡಿ, ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರು ಕಾಂ.ಎಂ.ಎನ್.ರಘುರಾಮರೆಡ್ಡಿ, ಸಿಪಿಐ(ಎಂ) ಬಾಗೇಪಲ್ಲಿ ತಾಲ್ಲೂಕು ಕಾರ್ಯದರ್ಶಿ ಕಾಂ.ಸಿದ್ದಗಂಗಪ್ಪ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಕಾಂ.ಕೆ.ನಾಗರಾಜು, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಕಾಂ.ಸಾವಿತ್ರಮ್ಮ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು ಸೇರಿದಂತೆ ಇತರೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಿಪಿಐಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮ ರೆಡ್ಡಿ ಮಾತನಾಡಿ, ಗ್ರಾಮೀಣ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಬಡರೈತರ ಕುಟುಂಬಗಳು ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿ ನರಳುತ್ತಿದ್ದಾರೆ. ಮತ್ತೊಂದೆಡೆ ಮೈಕ್ರೋಫೈನಾನ್ಸ್ ನಂತರ ಸಂಸ್ಥೆಗಳಿಂದ ನಿರಂತರ ಅಭದ್ರತೆ, ಮಾನಸಿಕ ಒತ್ತಡ ಹೆಚ್ಚಿಸಿ ಆತ್ಮಹತ್ಯೆಗೆ ದೂಡುವ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಚಳುವಳಿಯೊಂದೇ ಜನತೆಯ ಮುಂದಿರುವ ಆಯ್ಕೆಯಾಗಿದೆ. ಜ್ವಲಂತ ಸಮಸ್ಯೆಗಳ ಮೇಲೆ ಮುಂದೆ ಚಳುವಳಿ ರೂಪಿಸಲು ಚಿಕ್ಕಬಳ್ಳಾಪುರ ಜಿಲ್ಲೆಯ 18ನೇ ಜಿಲ್ಲಾ ಸಮ್ಮೇಳನ ನವೆಂಬರ್ 21-22, 2024 ಬಾಗೇಪಲ್ಲಿಯಲ್ಲಿ ನಡೆಯುತ್ತಿದ್ದು, 21 ರಂದು ನಡೆಯುವ ಬಹಿರಂಗ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ರಾಗಿ, ಜೋಳ ಖರೀದಿ ಕೇಂದ್ರ; ನೋಂದಣಿಗೆ ಡಿ.ಸಿ ಮನವಿ
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ವಾಲ್ಮೀಕಿ ಅಶ್ವತ್ಥಪ್ಪ, ಒಬಳ ರಾಜು, ಕೃಷ್ಣಪ್ಪ, ಮುನಿಯಪ್ಪ, ರಫೀಕ್, ಲಕ್ಷ್ಮೀ ನಾರಾಯಣ, ಎಸ್.ಎಫ್ ಐ ಮುಖಂಡ ಸೋಮಶೇಖರ್ ಮುಂತಾದವರಿದ್ದರು.