ಸ್ವಾತಂತ್ರ್ಯ ಬಂದು 7 ದಶಕಗಳೇ ಗತಿಸಿವೆ. ಆದರೂ, ರಾಜ್ಯದಲ್ಲಿನ 19,806 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಬಾಡಿಗೆ, ಪಂಚಾಯತಿ ಕಟ್ಟಡ ಸೇರಿದಂತೆ ಹಲವಾರು ಖಾಸಗಿ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಹಾಂತೇಶ ಕಂಬಾರ ಗುಡುಗಿದ್ದಾರೆ.
ಈ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಮಹಾಂತೇಶ ಕುಂಬಾರ, “ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 66,361 ಅಂಗನವಾಡಿ ಕೇಂದ್ರಗಳ ಪೈಕಿ, 46,559 ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇನ್ನುಳಿದ 19,806 ಅಂಗನವಾಡಿಗಳಲ್ಲಿ 1,055 ಪಂಚಾಯತಿ ಕಟ್ಟಡ, 2,457 ಸಮುದಾಯ ಭವನ, 68 ಯುವಕ ಮಂಡಳಿ, 43 ಮಹಿಳಾ ಮಂಡಳಿ, 4,505 ಶಾಲಾ ಕಟ್ಟಡ ಹಾಗೂ 10,874 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ” ಎಂದು ತಿಳಿಸಿದ್ದಾರೆ.
“ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ಧ ಅರ್ಜಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ. ಸ್ವಂತ ಕಟ್ಟಡಗಳನ್ನು ಹೊಂದಿಲ್ಲದ ಅಂಗನವಾಡಿಗಳಿಗೆ ಶೀಘ್ರವೇ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಕ್ತ ಕ್ರಮಕೈಗೊಂಡು ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.