ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 24 ಮಂದಿ ಅತಿಥಿ ಶಿಕ್ಷಕರನ್ನು ಹೆಚ್ಚುವರಿ ವರ್ಗಾವಣೆಯ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಶಿವಪುರ ಸತ್ಯಾಗ್ರಹ ಸೌಧದ ಬಳಿ ಸಭೆ ಸೇರಿದ ಅತಿಥಿ ಶಿಕ್ಷಕರು, ಶಿಕ್ಷಣ ಇಲಾಖೆಯ ಈ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪ್ರಭು ಮಾತನಾಡಿ, “ಶಿಕ್ಷಣ ಇಲಾಖೆಯ ಆದೇಶದಲ್ಲೇ ಖಾಯಂ ಶಿಕ್ಷಕರು ವರ್ಗಾವಣೆಯಾಗಿ ಬಂದರೆ ಅತಿಥಿ ಶಿಕ್ಷಕರನ್ನು ಕೈಬಿಡದೆ ಬೇರೆ ಶಾಲೆಗೆ ಸ್ಥಳನಿಯೋಜಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ” ಎಂದು ಆರೋಪಿಸಿದರು.
ರಾಜ್ಯದ ಯಾವುದೇ ತಾಲೂಕುಗಳಲ್ಲಿ ಈ ರೀತಿಯಾಗಿ ಅತಿಥಿ ಶಿಕ್ಷಕರನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಉದಾಹರಣೆ ಇಲ್ಲದಿರುವುದನ್ನು ಉಲ್ಲೇಖಿಸಿದ ಅವರು, ಉಪನಿರ್ದೇಶಕರ ಗಮನಕ್ಕೆ ವಿಷಯವನ್ನು ತಂದರೂ ಸಹ ʼನನಗೆ ಸಂಬಂಧ ಇಲ್ಲʼ ಎಂಬ ಉತ್ತರ ಮಾತ್ರ ಸಿಕ್ಕಿದೆಯೆಂದು ತಿಳಿಸಿದರು.
ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಕರ್ತವ್ಯದಿಂದ ತೆಗೆದುಹಾಕಿರುವುದರಿಂದ ಅತಿಥಿ ಶಿಕ್ಷಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಬೇಕಾದಾಗ ಬಳಸಿ, ಬಳಿಕ ಬೀಸಾಡುವ ರೀತಿಯಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೂ ವಿಷಯವನ್ನು ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕರ್ತವ್ಯದಿಂದ ಬಿಡುಗಡೆಗೊಳಿಸಲ್ಪಟ್ಟ ಅತಿಥಿ ಶಿಕ್ಷಕರಿಗೆ ತಕ್ಷಣ ಸ್ಥಳನಿಯೋಜನೆ ಮಾಡಬೇಕು. ಇಲ್ಲದಿದ್ದರೆ ರಜೆಯ ಬಳಿಕ ಶಾಲೆಗಳು ಪುನಃ ಆರಂಭವಾದಾಗ ನಾವು ಶಾಲೆ ತೊರೆದು ಪ್ರತಿಭಟಿಸಲು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮಂಡ್ಯ | ಮುಯ್ಯಾಳು ಸಂಸ್ಕೃತಿಯನ್ನು ಮತ್ತೆ ಮುನ್ನೆಲೆಗೆ ತಂದ ಕನ್ನಡದ ಮನಸ್ಸುಗಳು
ಸಭೆಯಲ್ಲಿ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವಿಜಯ್ ಕುಮಾರ್, ಮಹೇಶ್, ಪ್ರಭು, ವಿಜಯ್, ಕಾರ್ತಿಕ್, ಸಾಗರ್, ಸುನೀತಾ, ಉಷಾ, ಚೇತನ್, ಚಂದ್ರಕೀರ್ತಿ, ಸತೀಶ್ ಕುಮಾರ್, ಕೌಶಲ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.