ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ವಸತಿ ರಹಿತ ನಿರಾಶ್ರಿತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಪಟ್ಟಣದ ಪ್ರದೇಶಗಳಲ್ಲಿ ಜಿ + 1 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಡವರಿಗೆ, ಮನೆಯಿಲ್ಲದ ನಿರಾಶ್ರಿತರಿಗೆ, ಕೊಳಚೆ ನಿವಾಸಿಗಳಿಗೆ ಮನೆಗಳನ್ನು ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಯೋಜನೆ ಇದು. ಆದರೆ ಮನೆಗಳು ಉಳ್ಳವರ ಪಾಲಾಗುತ್ತಿದ್ದು, ವಸತಿ ರಹಿತ ಕುಟುಂಬಗಳು ಮನೆಗಳಿಂದ ವಂಚಿತರಾಗುತ್ತಿರುವ ಸಂಗತಿ ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಗದಗ – ಬೆಟಗೇರಿ ಅವಳಿ ನಗರಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 293 ಕೋಟಿ ರೂ ವೆಚ್ಚದಲ್ಲಿ ಮನೆಗಳು ನಿರ್ಮಾಣ ಆಗುತ್ತಿದೆ. ಇದರಲ್ಲಿ ರಾಜ್ಯದ ಪಾಲು 83 ಕೋಟಿ, ಕೇಂದ್ರ ಸರ್ಕಾರದ 91 ಕೋಟಿ, ಗದಗ-ಬೆಟಗೇರಿ ನಗರ ಸಭೆ 3.9 ಕೋಟಿ ಹಾಗೂ ಫಲಾನುಭವಿಗಳ ವಂತಿಗೆ 113 ಕೋಟಿ ರೂ ಇದೆ.

ಅವಳಿ ನಗರಗಳಲ್ಲಿ ಒಟ್ಟು ₹293 ಕೋಟಿ ರೂಪಾಯಿ ವೆಚ್ಚದಲ್ಲಿ 3630 ಮನೆಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ಆದೇಶ ಆಗಿದ್ದವು. ಇದರಲ್ಲಿ ಒಂದನೇ ಹಂತದಲ್ಲಿ ಗದಗ ಪಟ್ಟಣದ ಗಂಗೆಮಡಿ ನಗರದಲ್ಲಿ 1008 ಮನೆಗಳು ನಿರ್ಮಾಣ ಹಂತದಲ್ಲಿದ್ದು, ಜಿ+1 ಮಾದರಿಯಲ್ಲಿ ಮನೆಗಳನ್ನು ಕಟ್ಟಲಾಗಿದೆ. 2016-17ರಲ್ಲಿ ಆರಂಭ ಕಾಮಗಾರಿ ಆರಂಭವಾಗಿದ್ದು, 2022ರಲ್ಲಿ ಕಾಮಗಾರಿ ಪೂರ್ಣಗೊಂಡು ಹಂಚಿಕೆ ಆಗಬೇಕಿತ್ತು. ಆದರೆ ಕೆಲವು ಮನೆಗಳು 2024ನೇ ಇಸವಿ ಮುಗಿಯುತ್ತಾ ಬಂದಿದ್ದರೂ ಈವರೆಗೆ ಪೂರ್ಣವಾಗಿ ಮುಗಿದಿಲ್ಲ. ಈ ಮನೆಗಳಲ್ಲಿ ವಸತಿರಹಿತರಿಗೆ, ಬಡವರಿಗೆ, ನಿರಾಶ್ರಿತರಿಗೆ 348 ಮನೆಗಳ ಫಲಾನುಭವಿಗಳಿಗೆ ತಿಳುವಳಿಕೆ ಪತ್ರವನ್ನು ಸರಕಾರದಿಂದ ನೀಡಿತ್ತು. ಆದರೆ, ಪತ್ರ ದೊರೆತವರಿಗೆ ಇನ್ನೂ ಕೂಡ ವಾಸಿಸುವ ಭಾಗ್ಯ ದೊರೆತಿಲ್ಲ ಎಂಬುದು ಸೋಜಿಗದ ಸಂಗತಿ.

ಉಳ್ಳವರಿಗಷ್ಟೇ ಮನೆಗಳು?
ಗಂಗೆಮಡಿ ನಗರದಲ್ಲಿರುವ 1008 ಪ್ರಧಾನ ಮಂತ್ರಿ ಅವಾಸ್ ಮನೆಗಳಲ್ಲಿ ಈಗಾಗಲೇ 240ಮನೆಗಳು ಉಳ್ಳವರಿಗೆ, ಸ್ಥಿತಿವಂತರಿಗೆ, ಶ್ರೀಮಂತರಿಗೆ, ಶಾಸಕರ ಹಿಂಬಾಲಕರಿಗೆ ಕೊಟ್ಟಿದ್ದಾರೆ ಎಂದು ಅರ್ಜಿ ಹಾಕಿದ್ದ ನಿರಾಶ್ರಿತರು ಆರೋಪ ಮಾಡಿದ್ದಾರೆ.
‘ಇವರಿಗೆ ಕೊಟ್ಟಿರುವ ಮನೆಗಳನ್ನು ಬಾಡಿಗೆಗೆ, ಲೀಜ್ ಗೆ ಕೊಡುತ್ತಿದ್ದಾರೆ. ಮನೆ ಇಲ್ಲದವರು ನಾವೇ ಹೋಗಿ ಬಾಡಿಗೆ ಕೇಳಿದರೆ ಎರಡು ಸಾವಿರ ಬಾಡಿಗೆ ಕೊಡಿ ಎಂದು ಕೇಳುತ್ತಿದ್ದಾರೆ’ ಎಂದು ವಸತಿರಹಿತರು ಗಂಭೀರ ಆರೋಪ ಮಾಡಿದ್ದಾರೆ.
ನಮಗೆ ತಿಳುವಳಿಕೆ ಪತ್ರಗಳನ್ನಷ್ಟೇ ಕೊಟ್ಟಿದ್ದಾರೆಯೇ ಹೊರತು ಇಲ್ಲಿವರೆಗೂ ಮನೆಗಳನ್ನು ಕೊಟ್ಟಿಲ್ಲ ಎಂದು ನಿರಾಶ್ರಿತರು ಹೇಳುತ್ತಿದ್ದಾರೆ. ಹೀಗೆ, ಹೇಳುತ್ತಿರುವವರೆಲ್ಲರೂ ಉದ್ಯೋಗಕ್ಕಾಗಿ ಕೂಲಿ ಮಾಡುವುದು, ಮನೆ ಮನೆ ಮುಸುರೆ ತಿಕ್ಕುವುದರ ಮೂಲಕ ಜೀವನ ಸಾಗಿಸುತ್ತಿದ್ದಾರೆ.

348 ಮನೆಗಳ ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ನೀಡುವ ಮುಂಚೆ ನಗರಸಭೆ ಸಮೀಕ್ಷೆ ಮಾಡಿತ್ತು. ಈ ಸಮೀಕ್ಷೆಯಲ್ಲಿ ಇವರಿಗೆ ಯಾವುದೇ ಸ್ವಂತ ಮನೆಗಳಿಲ್ಲ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಿ, ವರದಿ ಮಾಡಿದ್ದರು. ಆದರೆ ಇವತ್ತಿಗೂ ಮನೆ ಹಂಚಿಕೆ ಆಗಿಲ್ಲ ಎಂಬುದು ಮಾತ್ರ ವಾಸ್ತವ.
ಕಳಪೆ ಕಾಮಗಾರಿ, ಕುಡುಕರ ಅಡ್ಡವಾದ ಕಟ್ಟಡ
ಗಂಗೆಮಡಿ ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಪೂರ್ಣವಾಗುವ ಹಂತದಲ್ಲಿದೆ. ಆದರೆ, ಯಾವ ಮನೆಗಳೂ ಕೂಡ ಸರಿಯಾಗಿ ನಿರ್ಮಾಣ ಆಗಿರದೆ ಕಳಪೆಯಿಂದ ನಿರ್ಮಾಣವಾಗಿವೆ.
ಕೆಲವು ಸ್ಥಳೀಯರು ಈ ಮನೆಗಳಲ್ಲಿ ದನಕರುಗಳನ್ನು ತಂದು ಕಟ್ಟುತ್ತಿದ್ದಾರೆ. ನಾಯಿಗಳು ವಾಸ ಮಾಡುವ ತಾಣವಾಗಿ ಮಾರ್ಪಟ್ಟಿದೆ. ಕುಡುಕರಂತೂ ಈ ನಿರ್ಮಾಣ ಹಂತದ ಮನೆಗಳನ್ನೇ ತಮ್ಮ ಅಡ್ಡವಾಗಿ ಮಾಡಿಕೊಂಡಿದ್ದಾರೆ. ಎಲ್ಲೆಂದರಲ್ಲಿ ಸಾರಾಯಿ ಬಾಟಲಿ ಪ್ಯಾಕೇಟುಗಳು ಕಾಣಸಿಗುತ್ತವೆ. ಮನೆಗಳ ಸುತ್ತಲೂ ಮುತ್ತಲೂ ಮುಳ್ಳು ಕಂಟಿ ಬೆಳೆದು ನಿಂತಿವೆ.

ಈ ಎಲ್ಲ ಸಂಗತಿಗಳ ಬಗ್ಗೆ ಈ ದಿನ ಡಾಟ್ ಕಾಮ್ ಜೊತೆಗೆ ವಸತಿರಹಿತ, ಫಲಾನುಭವಿ ಪರ್ವೀನಾ ಬಾನು ಮಾತನಾಡಿ, “ನಮಗೆ ಮನೆಗಳಿಲ್ ರಿ. ನಮಗೆ ಮನೆ ಕೊಡಿ ಎಂದು ಕೇಳಿ ಕೇಳಿ ಸಾಕಾಗಿ ಹೋಗೈತ್ರಿ. ಓಟು ಕೇಳಬೇಕಾದ್ರೆ ನಮ್ ಮನೆ ಮನೆಗಳಿಗೆ ಬಂದು ಕೇಳ್ತಾರ್ರೀ, ನಮ್ಮ ಹಕ್ಕನ್ನು ಹಾಕಿ, ನಮ್ಮ ಹಕ್ಕನ್ನು ಕೇಳಿದರೆ ನಮಗೆ ಕೊಡ್ತಿಲ್ಲ. ಶಾಸಕರೇ ನಮಗೆ ತಿಳುವಳಿಕೆ ಪತ್ರ ನೀಡ್ಯಾರ್ ರಿ. ಆದ್ರೂ ಏನೂ ಆಗಿಲ್ರಿ. ಈ ಮನೆಗಳಲ್ಲೇ ವಾಸ ಮಾಡ್ಬೇಕು ಅನ್ನೋದು ನಮ್ ಕನಸ್ರೀ. ಜೈಲಿಗ್ ಹಾಕಿದ್ರೂ ಪರ್ವಾಗಿಲ್ರೀ. ಹೋರಾಟ ಮಾಡ್ತೀವಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈದಿನ ಡಾಟ್ ಕಾಮ್ ನೊಂದಿಗೆ ಗದಗ ಸ್ಲಮ್ ಸಮಿತಿ ಅಧ್ಯಕ್ಷ ಗದಗ ಇಮ್ತಿಯಾಝ್ ಆರ್ ಮಾನ್ವಿ ಮಾತನಾಡಿ, “ಮನೆಯಿಲ್ಲದವರಿಗೆ, ಬಡವರಿಗೆ, ಸ್ಲಮ್ ಜನರಿಗೆ ಮನೆಗಳು ಸಿಗಬೇಕೆಂದು ಸುಮಾರು 2014ರಿಂದ ಸ್ಲಮ್ ಸಮಿತಿ ಮೂಲಕ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಇದರ ಫಲವಾಗಿ 340 ಮನೆಗಳನ್ನು ಫಲನುಭವಿಗಳಿಗೆ ತಿಳುವಳಿಕೆ ಪತ್ರ ನೀಡಿದ್ದಾರೆ. ಮನೆಗಳನ್ನು ಹಂಚಿಕೆ ಮಾಡಿ ಎಂದು ಸಾಕಷ್ಟು ಹೋರಾಟಗಳನ್ನು ಮಾಡುತ್ತಲೇ ಬಂದಿದ್ದೇವೆ. ಸುಳ್ಳು ಹೇಳುತ್ತಲೇ ಬಂದಿದ್ದಾರೆ ಈ ಭಾಗದ ಸಚಿವರು. ತಕ್ಷಣವೇ 348 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲರ ಸಮ್ಮುಖದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ನೂರಾರು ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಈ ಮನೆಗಳು ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಸಿಗಬೇಕಿದೆ. ಈಗಲಾದರೂ ಈ ಭಾಗದ ಸಚಿವರು ವಸತಿರಹಿತರಿಗೆ ಮನೆಗಳನ್ನು ಹಂಚಿಕೆ ಮಾಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.