ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಒಡೆದು ಹೋಗಿದ್ದ ಬಸವಕಲ್ಯಾಣ ತಾಲೂಕಿನ ಕೋಹಿನೂರ್, ಅಟ್ಟೂರ್ ಗ್ರಾಮಗಳ ಹಳೆ ಕೆರೆಗಳ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರ 3.85 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಬೀದರ್ ಸಂಸದ ಸಾಗರ್ ಖಂಡ್ರೆ ಹೇಳಿದ್ದಾರೆ.
ಕೆರೆ ಒಡೆದ ಪರಿಣಾಮ ಸುತ್ತಲಿನ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ಈ ಕುರಿತು ತಮ್ಮ ʼಎಕ್ಸ್ʼ ಖಾತೆಯಲ್ಲಿ ʼಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಬಸವಕಲ್ಯಾಣ ತಾಲೂಕಿನ ಕೊಹಿನೂರ, ಅಟ್ಟೂರ್ ಗ್ರಾಮಗಳ ಹಳೆ ಕೆರೆಗಳು ಒಡೆದು ಹೋಗಿದ್ದವು. ಅಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕೆರೆಗಳ ಪುನರುಜ್ಜೀವನಕ್ಕೆ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದೆ. ಕೊಟ್ಟ ಭರವಸೆ ಅಂತೆ ಕೊಹಿನೂರ, ಅಟ್ಟೂರ್ ಕೆರೆಗಳ ಪುನರುಜ್ಜೀವನಕ್ಕೆ ಕರ್ನಾಟಕ ಸರ್ಕಾರ 3.85 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆʼ ಎಂದು ಹಂಚಿಕೊಂಡಿದ್ದಾರೆ.
ಕೆರೆಗಳ ಪುನರುಜ್ಜೀವನಕ್ಕೆ ಅನುದಾನ ಬಿಡುಗಡೆ ಮಾಡಲು ಸಹಕರಿಸಿದ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಅನುದಾನ ಒದಗಿಸಿದ ಸಣ್ಣ ನೀರಾವರಿ ಸಚಿವ ಎನ್.ಬೋಸರಾಜು ಅವರಿಗೆ ಸಂಸದ ಸಾಗರ್ ಖಂಡ್ರೆ ಅವರು ಧನ್ಯವಾದ ತಿಳಿಸಿದ್ದಾರೆ.