ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ನಾಸೀರ್(ಕಾಲ), ನಯಾಜ್(ಶಾನು), ಶ್ರೀನಾಥ್ (ಬಿರಿಯಾನಿ) ಬಂಧಿತರು. ಬಂಧಿತ ನಾಸಿರ್ ಎಂಬಾತ ತಾಲೂಕಿನ ಗೂಳೂರು ಗ್ರಾಮದ ಮಿಲ್ಕ್ ಡೈರಿ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದು, ಈ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸುಮಾರು 1.5 ಕೆಜಿ ಗಾಂಜವನ್ನು ವಶಪಡಿಸಿಕೊಂಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು, ಯುವಜನರನ್ನು ಟಾರ್ಗೆಟ್ ಮಾಡಿಕೊಂಡು ಪಟ್ಟಣದ ಕಾಲೇಜು, ಟೀ ಅಂಗಡಿ ಸೇರಿದಂತೆ ವಿವಿದೆಡೆ ಆರೋಪಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿಯ ಅರಕು ಪ್ರದೇಶದಲ್ಲಿ ಬೆಳೆಯುವ ಗಾಂಜಾವನ್ನು ದಂಧೆಕೋರರು ಬಾಗೇಪಲ್ಲಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಸೂಚನೆಯಂತೆ ಬಾಗೇಪಲ್ಲಿ ಠಾಣೆ ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಿದ್ದು, ಆರು ಜನರ ಪೈಕಿ ಮೂವರು ದಂಧೆಕೋರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಮೂವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಜೈಲಿಗಟ್ಟಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪಕ್ಷ ನಿಷ್ಠರಿಗೆ ಮಾತ್ರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ : ಶಾಸಕ ಪ್ರದೀಪ್ ಈಶ್ವರ್
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಮುನಿರತ್ನಂ, ಪೊಲೀಸ್ ಪೇದೆಗಳಾದ ಮೋಹನ್, ಧನಂಜಯ, ಸಾಗರ್, ಅನಿಲ್, ರಾಜಪ್ಪ ಮತ್ತಿತರರು ಭಾಗವಹಿಸಿದ್ದರು.