ಸಂವಿಧಾನದ 371 (ಜೆ ) ಜಾರಿಯಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಜನರಿಗೆ ತಪ್ಪು ಸಂದೇಶ ನೀಡಲು ಬೆಂಗಳೂರಿನಲ್ಲಿ ಕೆಲವರು ಪ್ರತಿಭಟನೆ ನಡೆಸಿ, ಈ ಭಾಗದ ಅಸ್ಮಿತೆಗೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದ್ದು, ಅದಕ್ಕೆ ಪ್ರತಿಯಾಗಿ ಜೂ.1ರಂದು ಕಲಬುರಗಿಯಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರು ತಿಳಿಸಿದರು.
ಕಲಬುರಗಿಯ ಪತ್ರಿಕಾ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಹಾಗೂ ಎಚ್‍ಕೆಇ ಅಧ್ಯಕ್ಷ ಶಶಿಲ್ ಜಿ.ನಮೋಶಿ ಮಾತನಾಡಿ, “ಸರಕಾರಿ ನೌಕರಿ, ಶೈಕ್ಷಣಿಕ ಪ್ರವೇಶಗಳಲ್ಲಿ ಮೀಸಲಾತಿ ಮತ್ತು 371(ಜೆ) ಅಡಿ ಸ್ವಾಯತ್ತ ಅಭಿವೃದ್ಧಿ ಮಂಡಳಿ ರಚನೆಯಾಗಿ ಒಂದು ದಶಕ ಕಳೆದಿದೆ. ಕೆಲವು ಅಭಿವೃದ್ಧಿ ಕಾರ್ಯಗಳು ಬಂದಿವೆ. ಭವಿಷ್ಯದಲ್ಲಿಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಿರುವಾಗ, ಸಂವಿಧಾನ ಕಲ್ಪಿಸಿದ ಮೀಸಲಾತಿಯ ಮೂಲ ಸಿದ್ಧಾಂತದ ಅರ್ಥವೇ ಗೊತ್ತಿಲ್ಲದ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರದ ಮೂಲಕ ಅಖಂಡ ಕರ್ನಾಟಕ ಒಡೆಯುವ ಹತಾಶ ಯತ್ನ ನಡೆಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕಲ್ಯಾಣಕ ರ್ನಾಟಕ ಪ್ರದೇಶ ಎಷ್ಟು ಹಿಂದುಳಿದಿದೆ ಎಂಬುದನ್ನು ಅಧಿಕೃತವಾಗಿ ಖಾತ್ರಿಪಡಿಸಿಕೊಳ್ಳಲು ಸರಕಾರದ ಅಧಿಕೃತ ಸಂಸ್ಥೆಗಳಾದ ಸತ್ಯಶೋಧನಾ ಸಮಿತಿ, ಧರಂಸಿಂಗ್ ಸಮಿತಿ ಹಾಗೂ ನಂಜುಂಡಪ್ಪ ವರದಿ ಸಮಿತಿಗಳು ತಮ್ಮ ತಮ್ಮ ವರದಿಗಳಲ್ಲಿ ಸ್ಪಷ್ಟವಾಗಿ ಇರುವ ಸತ್ಯವನ್ನುಉಲ್ಲೇಖಿಸಿವೆ. ವಿಶಾಲ ಕರ್ನಾಟಕದ ಮಾತಿಗೆ ಬಂದಾಗ ಕಲ್ಯಾಣಕ ರ್ನಾಟಕ ಜಿಲ್ಲೆಗಳ ಜನರು ಶಿಕ್ಷಣ ಮತ್ತುಉದ್ಯೋಗಾವಶಕಾಶ ಮತ್ತು ಅಭಿವೃದ್ಧಿಯಿಂದ ವಂಚಿತರಾದಾಗ ಕ್ಯಾರೆ ಎನ್ನದ ಸಂವಿಧಾನ ವಿರೋಧಿ ಶಕ್ತಿಗಳು ಇಂದು 371 (ಜೆ) ಅಡಿ ಕಲ್ಯಾಣ ಭಾಗಕ್ಕೆ ಸಂವಿಧಾನ ಬದ್ಧವಾಗಿ ಸವಲತ್ತುಗಳು ಲಭಿಸುತ್ತಿರುವಾಗ ಆರಂಭಿಕ ಹಂತದಲ್ಲಿಯೇ 371(ಜೆ) ಕುರಿತು ವಿರೋಧಿಸುತ್ತಿರುವ ಮೂಲಕ ಕೀಳುಮಟ್ಟದ ಬುದ್ಧಿ ಪ್ರದರ್ಶನ ಮಾಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜೂನ್ 1 ರಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಬೆಳಿಗ್ಗೆ10 ಗಂಟೆಗೆ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆಯುವ ಬೃಹತ್ ಹೋರಾಟದಲ್ಲಿ ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಇರುವ ಸರಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖಂಡರು ಹಾಗೂ ಎಲ್ಲ ರಾಜಕಿಯ ಪಕ್ಷಗಳ ಮುಖಂಡರು, ಆಯಾ ಕ್ಷೇತ್ರದ ಗಣ್ಯರು, ವಿವಿಧಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನಿಷ್ಪಕ್ಷಪಾತ ಮತ ಎಣಿಕೆಗೆ ʼಎದ್ದೇಳು ಕರ್ನಾಟಕʼ ಆಗ್ರಹ
ಪತ್ರಿಕಾಗೋಷ್ಠಿಯಲ್ಲಿ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಶಾಂತಪ್ಪ ಸೂರನ್, ಶಿಕ್ಷಣ ತಜ್ಞರಾದ ಪ್ರತಾಪಸಿಂಗ್ ತಿವಾರಿ, ಡಾ.ಎಸ್.ಎ.ಖಾದ್ರಿ, ಡಾ. ಬಸವರಾಜ ಕುಮನೂರ, ಪ್ರೊ.ಆರ್.ಕೆ.ಹುಡಗಿ, ಡಾ.ಬಿ.ಸಿ.ಗುಳಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.