ಸಂವಿಧಾನದ 371 (ಜೆ ) ಜಾರಿಯಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಜನರಿಗೆ ತಪ್ಪು ಸಂದೇಶ ನೀಡಲು ಬೆಂಗಳೂರಿನ ಹಸಿರು ಪ್ರತಿಷ್ಠಾನ ಪ್ರತಿಭಟನೆ ನಡೆಸಿ, ಈ ಭಾಗದ ಅಸ್ಮಿತೆಗೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದ್ದು, ಅದಕ್ಕೆ ಪ್ರತಿಯಾಗಿ ಜೂ.29ರಂದು ಬೀದರ್‌ನಲ್ಲಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ನಗರದ ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಶನಿವಾರ ನಡೆದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಲ್ಯಾಣ ಕಲ್ಯಾಣ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, “ಇದು ಭಾವನಾತ್ಮಕ ಹೋರಾಟ. ನಮ್ಮ ಭಾಗದ ಜನರಿಗೆ 371(ಜೆ) ವರದಾನವಾಗಿದೆ. ಇನ್ನೂ ಅನೇಕ ತಾಂತ್ರಿಕ ಸಮಸ್ಯೆಗಳಿವೆ.ಅದನ್ನು ಸರಿಪಡಿಸಿ ಅನುಷ್ಠಾನಗೊಳಿಸಬೇಕಿದೆ. ಆದರೆ ಕಲ್ಯಾಣಕ ರ್ನಾಟಕ ಜಿಲ್ಲೆಗಳ ಜನರು ಶಿಕ್ಷಣ ಮತ್ತುಉದ್ಯೋಗಾವಶಕಾಶ ಮತ್ತು ಅಭಿವೃದ್ಧಿಯಿಂದ ವಂಚಿತರಾದಾಗ ಕ್ಯಾರೆ ಎನ್ನದ ಸಂವಿಧಾನ ವಿರೋಧಿ ಶಕ್ತಿಗಳು ಬೆಂಗಳೂರಿನಲ್ಲಿ ಹೊಸ ಸಂಘಟನೆ ಹುಟ್ಟು ಹಾಕಿ ನಮ್ಮ ಜನರ ಭಾವನೆ ಕೆದಕುವ ಕೆಲಸ ಮಾಡಲಾಗುತ್ತಿದೆ. ಇದನ್ನು ಬಲವಾಗಿ ಖಂಡಿಸಿ, ನಾವೆಲ್ಲರೂ ಒಂದಾಗಬೇಕಿದೆ” ಎಂದರು.
ಪ್ರಗತಿಪರ ಚಿಂತಕ ಆರ್.ಕೆ.ಹುಡುಗಿ ಮಾತನಾಡಿ. “ಈ ಹೋರಾಟ ನಾವೆಲ್ಲರೂ ಸವಾಲಾಗೆ ಸ್ವೀಕರಿಸಬೇಕಾಗಿದೆ. ನಮ್ಮ ಹಕ್ಕಿಗಾಗಿ ಈ ಹೋರಾಟ ನ್ಯಾಯ ಸಮ್ಮತವಾಗಿದೆ. ಜಾತಿ, ಮತ, ಪಂಥ, ಭೇದವಿಲ್ಲದೆ ಎಲ್ಲ ಪ್ರಗತಿಪರ ವಿಚಾರಧಾರೆ ಹಾಗೂ ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಪ್ರತಿಭಟಿಸೋಣ” ಎಂದರು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, “ಈ ಹೋರಾಟ ನ್ಯಾಯ ಸಮ್ಮತವಾಗಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ನಾವೆಲ್ಲರೂ ಸೇರಿ ಜೂನ್ 29ರಂದು ನಗರದಲ್ಲಿ ನಮ್ಮ ಸ್ವಾಭಿಮಾನಕ್ಕಾಗಿ ಪ್ರತಿಭಟಿಸೋಣ” ಎಂದು ಕರೆ ನೀಡಿದರು.
ಸಭೆಯಲ್ಲಿ ಹೋರಾಟ ಸಮಿತಿ ಗೌರಾಧ್ಯಕ್ಷ ಬಸವರಾಜ್ ದೇಶಮುಖ, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು, ಶಿವಶರಣಪ್ಪ ವಾಲಿ, ಬಸವರಾಜ ಜಾಬಶೆಟ್ಟಿ, ಬಿ.ಜಿ.ಶೆಟಕಾರ ಹಾಗೂ ಇತರರು ಮಾತನಾಡಿದರು.
ಬಾಬು ವಾಲಿ, ಡಾ ರಜನೀಶ್ ವಾಲಿ, ದೀಪಕ ವಾಲಿ, ಆನಂದ ದೇವಪ್ಪ, ಸೋಮಶೇಖರ ಪಾಟಿಲ ಗಾದಗಿ, ಶ್ರೀಕಾಂತ ಸ್ವಾಮಿ, ಸಿದ್ದರಾಮಪ್ಪ ಮಾಸಿಮಾಡೆ, ಮಾರುತಿ ಬೌದ್ದೆ, ಶರಣಪ್ಪ ಕರ್ನಲ್, ಜಗದೀಶ ಬಿರಾದಾರ, ಸಂತೋಷ್ ಜೋಳದಾಬಕೆ, ಬಸವರಾಜ ಧನ್ನೂರ, ಮಾಳಪ್ಪ ಅಡಸಾರೆ, ಆನಂದ ಘಂಟೆ, ಭಾರತಿ ವಸ್ತ್ರದ, ಜಯದೇವಿ ಯದಲಾಪುರ, ಪಾರ್ವತಿ ಸೋನಾರೆ, ಸಿ.ಆನಂದರಾವ್, ಎಸ್.ಎಮ್.ಜನವಾಡಕರ್, ನಿಜಾಮುದ್ದೀನ್, ಆಸೀಫೊದ್ದೀನ್, ವಿಜಯಕುಮಾರ ಸೋನಾರೆ, ರಮೇಶ ಬಿರಾದಾರ, ರೇವಣಸಿದ್ದಪ್ಪ ಜಲಾದೆ, ಶಶಿ ಹೊಸಳ್ಳಿ , ಚಂದ್ರಶೇಖರ ಪಾಟೀಲ ಸೇರಿದಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಾಮಾಜಿಕ ಚಿಂತಕರು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ದೇವದಾರಿಯಲ್ಲಿ ಗಣಿಗಾರಿಕೆಗಿಲ್ಲ ದಾರಿ; ಅನುಮತಿ ನಿರಾಕರಿಸಲು ಅರಣ್ಯ ಸಚಿವ ಖಂಡ್ರೆ ಸೂಚನೆ
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರು , ಶಿವಶಂಕರ ಟೋಕರೆ ನಿರೂಪಿಸಿದರು, ಟೀಂ ಯುವಾ ಸಂಯೋಜಕ ವಿನಯ ಮಾಳಗೆ ವಂದಿಸಿದರು.