ಹಳ್ಳ ಹಿಡಿದ ಪಿಎಂ ವಿಶ್ವಕರ್ಮ, ಮುದ್ರಾ ಯೋಜನೆ | 3 ಅರ್ಜಿಗಳು ಬಾಕಿ
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಸೌಲಭ್ಯಕ್ಕಾಗಿ ನೋಂದಣಿಯಾಗಿರುವ ಸುಮಾರು 3 ಸಾವಿರ ಅರ್ಜಿಗಳು ವಿಶ್ವಕರ್ಮ ಜಾಲತಾಣದಲ್ಲಿ ದೂಳು ಹಿಡಿಯುತ್ತಿವೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ಬಾಗೇಪಲ್ಲಿ ತಾಲೂಕಿನಲ್ಲಿ ಎಳ್ಳು ನೀರು ಬಿಟ್ಟಂತಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಬೂಸ್ಟರ್ ಡೋಸ್ ನೀಡಬೇಕಿದೆ.
ಬಾಗೇಪಲ್ಲಿ ಪುರಸಭೆ ಹಾಗೂ ತಾಲೂಕಿನ 25 ಗ್ರಾಮ ಪಂಚಾಯತಿಗಳಿಂದ ವಿವಿಧ ಕುಲಕಸುಬು ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸೌಲಭ್ಯಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಕಮ್ಮಾರ ವೃತ್ತಿ, ಕಲ್ಲು ಒಡೆಯುವವರು, ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು, ಬೀಗ ರಿಪೇರಿ, ಅಕ್ಕ ಸಾಲಿಗ, ಕುಂಬಾರ, ಚಮ್ಮಾರ ಕುಶಲಕರ್ಮಿ, ಮೇಸ್ತ್ರಿ ಬುಟ್ಟಿ, ಚಾಪೆ, ಪೊರಕೆ, ಬೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕ, ಹೂವು ವ್ಯಾಪಾರ, ಮಡಿವಾಳ, ದರ್ಜಿ, ಮೀನಿನ ಬಲೆ ಸಿದ್ದಪಡಿಸುವ ಸುಮಾರು 3041 ಮಂದಿ ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

2023ರ ಡಿಸೆಂಬರ್ ನಿಂದ ಇದುವರೆಗೂ 107 ಅರ್ಜಿಗಳನ್ನು ಮಾತ್ರ ಪರಿಶೀಲಿಸಿದ್ದು, ಉಳಿದಂತಹ 2934 ಅರ್ಜಿಗಳು ವಿಶ್ವಕರ್ಮ ಪೋರ್ಟಲ್‌ನಲ್ಲಿ ದೂಳು ಹಿಡಿಯುತ್ತಿವೆ. ಬಾಗೇಪಲ್ಲಿ ಪುರಸಭೆಯಲ್ಲಿ 401 ಕುಶಲಕರ್ಮಿಗಳು ನೋಂದಣಿ ಆಗಿದ್ದು, 294 ಅರ್ಜಿಗಳು ನೋಂದಣಿ ಹಂತದಲ್ಲೆ ಬಾಕಿ ಉಳಿದಿವೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅನುಷ್ಠಾನ ಹೊಣೆ ಹೊತ್ತಿರುವ ಡೇ-ನಲ್ಮ್ ವಿಭಾಗದ ಅಧಿಕಾರಿಗಳು ಬಾಗೇಪಲ್ಲಿ ತಾಲೂಕಿನಲ್ಲಿ ನಿಷ್ಕ್ರಿಯವಾಗಿದ್ದಾರೆ. ಅರ್ಜಿ ವಿಲೇವಾರಿ ವಿಚಾರದಲ್ಲಿ ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿದ್ದಾರೆ.
ಇದನ್ನೂ ಓದಿದ್ದೀರಾ? ಬಾಗೇಪಲ್ಲಿ | ಏಡ್ಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ : ನ್ಯಾ.ಮಂಜುನಾಥ ಚಾರಿ
ಅಧಿಕಾರಿಗಳ ಆದೇಶಕ್ಕೂ ಕಿಮ್ಮತ್ತಿಲ್ಲ :
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ರಾಷ್ಟೀಯ ಜೀವನೋಪಾಯ ಅಭಿಯಾನ ಇಲಾಖೆಯ ಅಭಿಯಾನ ನಿರ್ದೇಶಕಿ ಪಿ.ವಿ.ಶ್ರೀವಿದ್ಯಾ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೂ, ಡೇ-ಎನ್.ಯು.ಎಲ್.ಎಂ ವಿಭಾಗದ ಅಧಿಕಾರಿಗಳು ಯೋಜನೆ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಮೇಲಧಿಕಾರಿಗಳ ಆದೇಶಕ್ಕೂ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ.

ಈ ಕುರಿತು ಈದಿನ.ಕಾಂ ಜತೆ ಮಾತನಾಡಿದ ತಾಲೂಕು ಪತ್ರಿಕಾ ವಿತರಕರೊಬ್ಬರು, ಬಾಗೇಪಲ್ಲಿ ಪಟ್ಟಣದಲ್ಲಿ ಪತ್ರಿಕಾ ವಿತರಕನಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾನು ಮುದ್ರಾ ಯೋಜನೆಯಡಿ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿ 1 ವರ್ಷ ಆಗಿದೆ. ಇದುವರೆಗೂ ನಾನು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸದ ಕಾರಣ ಯೋಜನೆ ಸೌಲಭ್ಯದಿಂದ ವಂಚಿತನಾಗಿದ್ದೇನೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅರ್ಜಿಗಳನ್ನು ಪರಿಶೀಲಿಸಿ ಯೋಜನೆ ಸಮರ್ಪಕ ಅನುಷ್ಠಾನದತ್ತ ಮುಖಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೋದಿ-ಅದಾನಿಗಳನ್ನು ಅಣಕಿಸುವುದಲ್ಲ; ಬಿಚ್ಚಿಟ್ಟು ಬಹಿರಂಗಗೊಳಿಸಬೇಕಿದೆ
ಪ್ರಧಾನ ಮಂತ್ರಿ ವಿಶ್ವ ಕರ್ಮ, ಮುದ್ರಾ ಮತ್ತು ಪಿ.ಎಂ ಸ್ವ-ನಿಧಿ ಯೋಜನೆಯಡಿ ಕುಶಲಕರ್ಮಿಗಳಿಗೆ, ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರಿಗೆ ಸಾಲ ಸೌಲಭ್ಯ ಕಲ್ಪಿಸಿದೆ. ಆದರೆ, ಸ್ಥಳೀಯ ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಬಾಗೇಪಲ್ಲಿ ತಾಲೂಕಿನಿಂದ ನೊಂದಣಿ ಆಗಿರುವ 4 ಸಾವಿರ ಅರ್ಜಿದಾರರ ಅರ್ಜಿಗಳು ಪ್ರಧಾನಮಂತ್ರಿ ವಿಶ್ವ ಕರ್ಮ ಆನ್ ಲೈನ್ ತಂತ್ರಾಶದಲ್ಲಿ ದೂಳು ಹಿಡಿಯುತ್ತಿದೆ ಎನ್ನುತ್ತಾರೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು.
-ರಾ.ನ.ಗೋಪಾಲ ರೆಡ್ಡಿ, ಬಾಗೇಪಲ್ಲಿ