- ಕುರಿಗಳನ್ನು ಹೊಕಕ್ಕೆ ಕರೆದೊಯ್ಯುವಾಗ ಘಟನೆ
- ಲಾರಿ ಚಾಲಕನ ವಿರುದ್ಧ ಪೊಲೀಸ್ ಠಾಣೆಗೆ ದೂರು
ಬೆಳಗಿನ ಜಾವ ರಸ್ತೆಯಲ್ಲಿ ಹೋಗುತ್ತಿದ್ದ ಕುರಿ ಮಂದೆಯ ಮೇಲೆ ಲಾರಿ ಹರಿದು 42 ಕುರಿಗಳು ಸ್ಥಳದಲ್ಲೇ ಮೃತಪಟ್ಟು, 26 ಕುರಿಗಳು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರ ತಿರುವಿನ ಬಳಿ ಬುಧವಾರ ನಡೆದಿದೆ.
ಚಿಕ್ಕ ಬೆಣಕಲ್ ಗ್ರಾಮದ ಅಯ್ಯಪ್ಪ ಮತ್ತು ಕನಕಗಿರಿಯ ಕನಕಪ್ಪ ಎಂಬುವರಿಗೆ ಸೇರಿದ ಕುರಿಗಳು ಅಪಘಾತದಲ್ಲಿ ಮೃತಪಟ್ಟಿವೆ. 42 ಕುರಿಗಳು ಮೃತಪಟ್ಟಿರುವುದು ಭಾರೀ ನಷ್ಟ ಅನುಭವಿಸುವಂತಾಗಿದೆ. ಮೃತಪಟ್ಟ ತಮ್ಮ ಕುರಿಗಳನ್ನು ಕಂಡು ಕುರಿಗಾಹಿಗಳು ಕಣ್ಣೀರುವ ಹಾಕಿದ್ದಾರೆ.
ಕುರಿಗಳನ್ನು ಮೇಯಿಸಲು ದೊಡ್ಡಿಯಿಂದ ಕರೆದೊಯ್ಯುತ್ತಿದ್ದ ವೇಳೆ ಕುರಿಗಳ ಮೇಲೆ ಲಾರಿ ಹರಿದಿದೆ. ಚಾಲಕ ವೇಗವಾಗಿ ಲಾರಿ ಚಲಾಯಿಸುತ್ತಿದ್ದ ಮತ್ತು ಆತನ ಅಜಾಗರೂಕತೆಯೇ ಘಟನೆ ಕಾರಣವೆಂದು ಕುರಿಗಾಹಿ ಅಯ್ಯಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಲಾರಿ ಚಾಲಕ ಶ್ರೀರಾಮನಗರದ ಶಿವರಾಜ ಬಿ ತಿಮ್ಮಪ್ಪ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.