ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಗಳ ಬಿಲ್ ಪಾವತಿ ಮಾಡಲು 50 ಕೋಟಿ ರೂ. ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯಯವರು ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
“ಆಧುನಿಕ ಅನುಭವ ಮಂಟಪ ಕಾಮಗಾರಿಗೆ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ವಿರೋಧ ಪಕ್ಷದ ಕೆಲವರು ವೃಥಾ ಆರೋಪ ಮಾಡುತ್ತಿರುವುದರಲ್ಲಿ ಹುರುಳಿಲ್ಲ. ಸರ್ಕಾರ ಬಸವಕಲ್ಯಾಣದ ಅಭಿವೃದ್ಧಿಗೆ ಮತ್ತು ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ಬದ್ಧವಾಗಿದೆ” ಎಂದು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಮಾರ್ಚ್ ತಿಂಗಳವರೆಗಿನ ಬಿಲ್ ಪಾವತಿ ಮಾಡಲು ಕೂಡಲೇ 50 ಕೋಟಿ ರೂ. ನೀಡಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಕೂಡಲೇ ಅವರು ಹಣ ಮಂಜೂರು ಮಾಡಿದರು. ಆ ಹಣ ಜಿಲ್ಲಾಧಿಕಾರಿ ಖಾತೆಗೂ ಜಮಾ ಆಗಿದೆ. ಆದರೂ ಕೆಲವರು ಸುಳ್ಳು ಪ್ರಚಾರ ಮಾಡಿ ಜನರಲ್ಲಿ ಗೊಂದಲ ಉಂಟು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ನ್ಯಾಯಾಲಯಗಳಲ್ಲಿ ಪೂಜೆ-ಪುನಸ್ಕಾರ ನಿಲ್ಲಿಸಿ; ಸಂವಿಧಾನಕ್ಕೆ ತಲೆಬಾಗಿ: ನ್ಯಾಯಮೂರ್ತಿ ಅಭಯ್ ಓಕಾ
“ಮುಂದಿನ ದಿನಗಳಲ್ಲಿ ಬಸವಕಲ್ಯಾಣದ ಆಧುನಿಕ ಅನುಭವ ಮಂಪಟಕ್ಕೆ ಹೆಚ್ಚಿನ ಅನುದಾನ ತಂದು, ಕಾಮಗಾರಿಗೆ ವೇಗ ನೀಡಿ, ಬಸವ ಭಕ್ತರ ಮತ್ತು ಕಲ್ಯಾಣ ಕರ್ನಾಟಕದ ಜನರ, ಜಗತ್ತಿನಲ್ಲಿ ಇರುವ ಶರಣರ ಕನಸು ನನಸು ಮಾಡಲು ಸರ್ವ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸ್ಪಷ್ಟಪಡಿಸಿದ್ದಾರೆ.
