ಐತಿಹಾಸಿಕ ಕಾರ್ಯಕ್ರಮ ನಡೆದಾಗ ವಿಶೇಷ ಗುರುತುಗಳನ್ನು ನಿರ್ಮಿಸಬೇಕು. ಆದ್ದರಿಂದ ಕರ್ನಾಟಕ ಸಂಭ್ರಮ-50ರ ಆಚರಣೆಯನ್ನು ಅಚ್ಚಳಿಯದ ಹಾಗೆ ನೆನಪಿನಲ್ಲಿಟ್ಟುಕೊಳ್ಳಲು ಗದಗ ಜಿಲ್ಲಾಡಳಿತವು 31 ಅಡಿ ಎತ್ತರದ ಸ್ತೂಪ ನಿರ್ಮಿಸಲು ನಿರ್ಣಯ ಕೈಗೊಂಡಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಸಚಿವ ಡಾ. ಎಚ್.ಕೆ ಪಾಟೀಲ ತಿಳಿಸಿದ್ದಾರೆ.
ಗದಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಮಾತನಾಡಿದರು. “ಸ್ತೂಪ ನಿರ್ಮಾಣ ಮಾಡಬೇಕು ಎನ್ನುವ ಕಲ್ಪನೆ ಹಿಂದಿನ ಕಾಲದಿಂದ ಇದ್ದರೂ, ಅನಾವರಣಗೊಳಿಸಲು ಸಾಧ್ಯವಾಗಿರಲಿಲ್ಲ. ಸ್ತೂಪದಲ್ಲಿ 1973 ಹಾಗೂ 2023ರ ಐತಿಹಾಸಿಕ ಘಟನೆಗಳನ್ನು ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ದಾಖಲಾಗಿರುತ್ತದೆ. ನವೆಂಬರ 3 ರಂದು ಸಿಎಂ ಸಿದ್ದರಾಮಯ್ಯ ಅವರು ಪಂ.ಪುಟ್ಟರಾಜ ಗವಾಯಿಗಳ ವೃತ್ತದಲ್ಲಿನ ಈ ಸ್ತೂಪವನ್ನು ಅನಾವರಣಗೊಳಿಸಲಿದ್ದಾರೆ” ಎಂದರು.
“ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಬೇಕು ಎಂಬ ದಿಸೆಯಲ್ಲಿ ಗದಗ ಭಾಗದವರು ವಿಶೇಷ ಪ್ರಯತ್ನ ಮಾಡಿದ್ದಾರೆ. ಕುಮಾರವ್ಯಾಸ ಅವರು ತಮ್ಮ ಕಾವ್ಯಕ್ಕೆ ಕರ್ನಾಟಕ ಭಾರತ ಕಥಾಮಂಜರಿ ಹೆಸರು ನೀಡಿದ್ದರೆ, ದುರ್ಗಸಿಂಹ ಹಾಗೂ ಅಲೂರು ವೆಂಕಟರಾಯರು ಕರ್ನಾಟಕ ಹೆಸರನ್ನು ಉಲ್ಲೇಖಿಸಿದ್ದಾರೆ. ಜಿಲ್ಲೆಯ ಅಂದಿನ ಪ್ರಮುಖರಾದ ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್. ಪಾಟೀಲ, ಎಂ.ಎಂ. ಕಣವಿ, ಸೇರಿ ಹಲವರು ಕೆಲಸ ಕರ್ನಾಟಕ ಹೆಸರು ನಾಮಕರಣವಾಗಲು ಶ್ರಮಿಸಿದ್ದಾರೆ. ಅಲ್ಲದೇ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಸಾಯಿ ಬಾಬಾ ಅವರು ಸಾಕ್ಷಿಯಾಗಿರುವಂತಹ ಸತ್ವಯುತ ದಿ. ಕಾಟನ್ ಸೇಲ್ ಸೊಸೈಟಿ ಆವರಣದ ನೆಲದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಪ್ರಾಮುಖ್ಯತೆ ಪಡೆದಿದೆ” ಎಂದರು.
“ರಾಜ್ಯದ ಒಂದು ಕೊಟಿಗೂ ಅಧಿಕ ಬಡ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲೆತ್ತುವ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ನಂತರ ಪ್ರಥಮವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಜರುಗುತ್ತಿರುವ ಕನ್ನಡ ಜಾತ್ರೆಗೆ ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ಸಾಹಿತಿಗಳು, ಸಾರ್ವಜನಿಕರು ಭಾಗವಹಿಸುವದರ ಮೂಲಕ ಕನ್ನಡ ಜಾತ್ರೆಯನ್ನು ಯಶಸ್ವಿಗೊಳಸಬೇಕು” ಎಂದು ಸಚಿವ ಎಚ್.ಕೆ.ಪಾಟೀಲ ಮನವಿ ಮಾಡಿದರು.
“ನಾಡಿನ ಸಂಸ್ಕೃತಿ ಇತಿಹಾಸ ಸಾರುವ 25 ಸಾವಿರ ಸ್ಮಾರಕಗಳಿವೆ. 500 ಕ್ಕೂ ಹೆಚ್ಚು ಸ್ಮಾರಕಗಳನ್ನು ಸರ್ಕಾರ ಘೋಷಿಸಿದ್ದು. 300 ಸ್ಮಾರಕಗಳ ರಕ್ಷಣೆಗೆ ನಿಗಾ ಇರಿಸಲಾಗಿದೆ. 200 ಕ್ಕೂ ಹೆಚ್ಚು ಸ್ಮಾರಕಗಳ ರಕ್ಷಣೆ ಆಗಬೇಕಾಗಿದೆ. ಇಂತಹ ಇತಿಹಾಸವನ್ನು ಸಾರುವ ಸ್ಮಾರಕಗಳ ರಕ್ಷಣೆಗೆ ನವೆಂಬರನಲ್ಲಿ ಘೋಷಣೆ ಮಾಡಲಿದ್ದೇವೆ ಎಂದರು. ಈಗಾಗಲೇ ಸ್ಮಾರಕ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು ರಾಜ್ಯದಲ್ಲಿನ ಸ್ಮಾರಕಗಳ ದತ್ತು ಸ್ವೀಕಾರ ಕುರಿತು ಅನಿವಾಸಿ ಭಾರತೀಯರೊಂದಿಗೆ ಸಭೆ ಜರುಗಿಸಿ ಸ್ಮಾರಕಗಳ ದತ್ತು ಸ್ವೀಕಾರ ಕುರಿತು ಮನವಿ ಮಾಡಿರುತ್ತೇನೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಾಜಿ ಸಂಸದ ಐ.ಜಿ.ಸನದಿ, ಸೇರಿದಂತೆ ಗಣ್ಯರಯ ಉಪಸ್ಥಿತರಿದ್ದರು.