ಮೈಸೂರು ರಾಜ್ಯವು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣವಾಯಿತು. ಮರುನಾಮಕರಣವಾದ ಹಿನ್ನೆಲೆಯಲ್ಲಿ 50ರ ಸಂಭ್ರಮಾಚರಣೆಯನ್ನು ನವೆಂಬರ್ 2ರಿಂದ ವರ್ಷಪೂರ್ತಿ ಆಚರಿಸಲಾಗುವುದು. ಗದಗನಲ್ಲಿ ನವೆಂಬರ್ 3 ರಂದು ಜರುಗುವ ‘ಕರ್ನಾಟಕ ನಾಮಕರಣಕ್ಕೆ 50ರ ಸಂಭ್ರಮ’ ಸಮಾರಂಭವು ಗದಗ ಜನತೆಗೆ ಭಾವನಾತ್ಮಕ, ಸಾಂಸ್ಕೃತಿಕ ಅವಿಸ್ಮರಣೀಯ ಕಾರ್ಯಕ್ರಮವಾಗಿ ಹೊರಹೊಮ್ಮಲಿ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ಕರ್ನಾಟಕ ನಾಮಕರಣಕ್ಕೆ 50ರ ಸಂಭ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. “ಕರ್ನಾಟಕ ನಾಮಕರಣ ಹಾಗೂ ಏಕೀಕರಣದಲ್ಲಿ ಗದಗ ಜಿಲ್ಲೆಯ ಮಹನೀಯರ ಪಾತ್ರ ಮಹತ್ತರವಾಗಿತ್ತು. ಕರ್ನಾಟಕ ನಾಮಕರಣದ ಕುರಿತು ನಿರ್ಣಯ ಗದಗ ಜಿಲ್ಲೆಯಿಂದ ಮಾಡುವ ಮೂಲಕ ಅವಿಸ್ಮರಣೀಯ ಐತಿಹಾಸಿಕ ಮುನ್ನುಡಿ ಬರೆಯಲಾಗಿತ್ತು. ಅಂದು ಗದಗನಲ್ಲಿ ನಡೆದ ಸಮ್ಮೇಳನದಲ್ಲಿ ಮೈಸೂರು ಮಹಾರಾಜರು, ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಾಗೂ ಸಚಿವರಾದ ಕೆ.ಎಚ್.ಪಾಟೀಲ ಅವರ ನೇತೃತ್ವದಲ್ಲಿ ಸಮ್ಮೇಳನ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿತು. ಇದೇ ನವೆಂಬರ್ 3 ರಂದು ನಡೆಯುವ ಸಮಾರಂಭವು ಗದಗ ಜನತೆಗೆ ಭಾವನಾತ್ಮಕವಾದ ಸಮಾರಂಭವಾಗಿದೆ. ಇದನ್ನು ಅತ್ಯಂತ ಶಿಸ್ತು ಬದ್ಧವಾಗಿ , ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸೋಣ” ಎಂದರು.
“ಬೆಳಿಗ್ಗೆ ನಗರದ ವೀರನಾರಾಯಣ ದೇವಸ್ಥಾನ ಆವರಣದಿಂದ ವಿವಿಧ ಕಲಾ ತಂಡಗಳು ಹಾಗೂ ಸ್ತಬ್ಧ ಭಾವಚಿತ್ರ ಗಳ ಮೆರವಣಿಗೆ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕರ್ನಾಟಕ 50 ರ ಸಂಭ್ರಮದ ಜ್ಯೋತಿ ಯನ್ನು ಬರ ಮಾಡಿಕೊಂಡು ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ವಿದ್ಯುಕ್ತಾಗಿ ಚಾಲನೆ ನೀಡುವರು. ಮೆರವಣಿಗೆಯು ವೀರನಾರಾಯಣ ದೇವಸ್ಥಾನದಿಂದ ಆರಂಭವಾಗಿ ಜಾಮಿಯಾ ಮಸೀದಿ, ಬಸವೇಶ್ವರ ಸರ್ಕಲ್, ಕೆ.ಎಚ್.ಪಾಟೀಲ ವೃತ್ತ, ಭೂಮ ರೆಡ್ಡಿ ಸರ್ಕಲ್, ಜನರಲ್ ಕಾರ್ಯಪ್ಪ ಸರ್ಕಲ್ ಮಾರ್ಗವಾಗಿ ಕಾಟನ್ ಸೇಲ್ ಸೊಸೈಟಿ ಅವರಣ ತಲುಪಲಿದೆ. ಮಾರ್ಗದುದ್ದಕ್ಕೂ ಬೀದಿಗಳ ಇಕ್ಕೆಲಗಳಲ್ಲಿ ದೀಪಾಲಂಕಾರ ಮಾಡಬೇಕು. ಜೊತೆಗೆ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಬೇಕು. ನಗರದ ಸ್ವಚ್ಛತೆಗೆ ಆದ್ಯತೆ ವಹಿಸಬೇಕು” ಎಂದು ಸೂಚಿಸಿದರು.
“ನಗರದಲ್ಲಿರುವ ಕುಮಾರವ್ಯಾಸ ಕಂಬಕ್ಕೆ ವಿಶೇಷ ದೀಪಾಲಂಕಾರ ಮಾಡಬೇಕು. ಜೊತೆಗೆ ಭೀಷ್ಮ ಕೆರೆ ಸೇರಿದಂತೆ ವಿವಿಧೆಡೆ ದೀಪಾಲಂಕಾರ ಕಂಗೊಳಿಸುವಂತಾಗಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಬೇಕು. ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಜರುಗುವ ವೇದಿಕೆ ಕಾರ್ಯಕ್ರಮ ಶಿಷ್ಟಾಚಾರ ಪಾಲನೆ, ಸಂಚಾರ ನಿಯಂತ್ರಣ ವ್ಯವಸ್ಥಿತವಾಗಿ ನಿರ್ವಹಿಸಬೇಕು” ಎಂದರು.
ಸಭೆಯಲ್ಲಿ ಅತಿಥಿಗಳ ಆಹ್ವಾನ, ಆಮಂತ್ರಣ ಪತ್ರಿಕೆ, ವೇದಿಕೆ ನಿರ್ಮಾಣ,ಬೀದಿ ಸ್ವಚ್ಛತೆ, ದೀಫಾಲಂಕಾರ, ದೇವಸ್ಥಾನಗಳ ದೀಪಾಲಂಕಾರ, ವೇದಿಕೆ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಕರೆತರುವ ಬಗ್ಗೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ , ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಮ್, ಉಪವಿಭಾಗಾಧಿಕಾರಿ ವೆಂಕಟೇಶ ನಾಯ್ಕ, ತಹಶೀಲ್ದಾರ ಶ್ರೀನಿವಾಸ ಮೂರ್ತಿ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವೀ ಗುಂಜೀಕರ್, ಆಹಾರ ಇಲಾಖೆಯ ಉಪನಿರ್ದೇಶಕ ಗಂಗಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಶಿರಾಳೆ, ಪಶು ಸಂಗೋಫನಾ ಇಲಾಖೆಯ ಉಪನಿರ್ದೇಶಕ ಡಾ.ಹುಲಗಣ್ಣವರ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ಎ.ಎ.ಕಂಬಾಳಿಮಠ, ಜಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕನಿರ್ದೇಶಕ ವೀರಯ್ಯ ಸ್ವಾಮಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ , ಡಿ.ಡಿ.ಪಿ.ಐ. ಎಂ.ಎ. ರಡ್ಡೇರ ಗಣ್ಯರಾದ ಸಿದ್ದು ಪಾಟೀಲ, ಬಿ.ಬಿ.ಅಸೂಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.