- ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ
- ಮುಂಗಾರು ಹಂಗಾಮಿನ ಬೆಳೆ ಅತಿವೃಷ್ಟಿ- ಅನಾವೃಷ್ಟಿಯಿಂದ ಸಂಪೂರ್ಣ ಹಾನಿ
ತಾಲೂಕಿನ ರೈತರ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ- ಅನಾವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಗೀಡಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕೂಡಲೇ ಔರಾದ ತಾಲೂಕನ್ನು ಬರಪಿಡಿತವೆಂದು ಘೋಷಿಸಿ, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು. ಪರಿಹಾರದ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಸಂಬಂಧ ರೈತ ಸಂಘದ ಔರಾದ ತಾಲೂಕು ಘಟಕದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ್ ಕಚೇರಿವೆರೆಗ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಮುಂಗಾರು ಬೆಳೆ ಹೆಸರು , ಉದ್ದು ಕಟಾವು ಸಮಯದಲ್ಲಿ ಅನಾವೃಷ್ಠಿಯಿಂದ ಶೇ.90% ಬೆಳೆ ಹಾನಿಯಾಗಿವೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದ, ಔರಾದ ತಾಲೂಕು ಅಧ್ಯಕ್ಷ ಪ್ರಕಾಶ ಬಾವಗೆ, ಉಪಾಧ್ಯಕ್ಷ ಝರಣಪ್ಪಾ ದೇಶಮುಖ, ಕಾರ್ಯದರ್ಶಿ ಬಸವರಾಜ ಘೂಳೆ, ಸಂಘಟನಾ ಕಾರ್ಯದರ್ಶಿ ಶಿವಾನಂದ ಯನಗುಂದಾ ಹಾಗೂ ರೈತ ಸಂಘದ ಪ್ರಮುಖರಾದ ರಾಜಕುಮಾರ ಪಾಟೀಲ್, ವಿಶ್ವನಾಥ ಧರಣೆ, ನಾಗಯ್ಯಾ ಸ್ವಾಮಿ, ಬಾಬುರಾವ, ಗೋವಿಂದರಾವ, ಲೋಣೆ, ಶಿವಯ್ಯ ಸ್ವಾಮಿ, ಬಾಲಾಜಿ ಮುಧಾಳೆ, ಮಲ್ಲಿಕಾರ್ಜುನ ತೆಗಂಪುರ, ತುಕರಾಮ, ಪ್ರವೀಣ ಕುಲಕರ್ಣಿ, ಕಲ್ಲಪ್ಪ ಹುಗ್ಗೆ, ಪ್ರಭಾಕರ ಹಣಮಂತರಾವ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೇಡಿಕೆಗಳು:
- ಔರಾದ ತಾಲೂಕಾ ಬರಪಿಡಿತ ಎಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂ. ರೈತರ ಖಾತೆಗೆ ಜಮೆ ಮಾಡಬೇಕು.
- ಬೆಳೆ ವಿಮೆ ಕಟ್ಟಿದ ರೈತರಿಗೆ ತಕ್ಷಣ ಬೆಳೆ ವಿಮೆ ಕಂಪನಿಯಿಂದ ಹಣ ಬಿಡುಗಡೆ ಮಾಡಿ ರೈತರ ಖಾತೆಗೆ ಜಮೆ ಮಾಡಿಸಬೇಕು.
- ಕೇಂದ್ರ ಸರಕಾರ ಕಬ್ಬಿಗೆ ಎಫ್.ಆರ್.ಪಿ. ದರ ನಿಗದಿಪಡಿಸಿದಂತೆ ರಾಜ್ಯ ಸರಕಾರವೂ ಎಸ್.ಎ.ಪಿ. ದರ ನಿಗದಿಪಡಿಸಿ ಪ್ರತಿ ಟನ್‌ಗೆ ರೂಪಾಯಿ 500 ರೂ. ರಂತೆ ಕೊಡಬೇಕು.
- ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿಬೇಕು.
- 2020 ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳು ಕೇಂದ್ರ ಸರಕಾರ ರದ್ದುಪಡಿಸಿದಂತೆ ರಾಜ್ಯ ಸರಕಾರವೂ ರದ್ದುಪಡಿಸಬೇಕು.
- ರಾತ್ರಿ ಸಮಯದಲ್ಲಿ ರೈತರ ತೋಟದ ಮನೆಗಳಿಗೆ ವಿದ್ಯುತ್ ಒದಗಿಸಬೇಕು.
- ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ರೈತರ ಹೊಲಗಳಿಗೆ ದಾರಿ ನಿರ್ಮಿಸಬೇಕು.
- ಕಾಡು ಪ್ರಾಣಿಗಳಿಂದ ರೈತರ ಬೆಳೆ ರಕ್ಷಣೆಗೆ ಅರಣ್ಯ ಇಲಾಖೆ ಪರ್ಯಾಯ ವ್ಯವಸ್ಥೆ ರೂಪಿಸಿ ರೈತರ ಹಿತ ಕಾಪಾಡಬೇಕು.