ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕಾರಂಜಾ ಕಾಲುವೆ ನಿರ್ಮಾಣ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಫಿರೋಜುದ್ದಿನ್ ಖಮ್ರೋದ್ದಿನ್ ಖಾನ್ ಅವರಿಗೆ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರ ನ್ಯಾಯಾಲವು 4 ವರ್ಷ ಜೈಲು ಹಾಗೂ 25 ಲಕ್ಷ ರೂ. ದಂಡ ವಿಧಿಸಿದೆ.
ಆರೋಪಿಯು ಅದಾಯಕ್ಕಿಂತ 6.43 ಲಕ್ಷ ರೂ. ಹೆಚ್ಚಿನ ಅಕ್ರಮ ಆಸ್ತಿ ಹೊಂದಿರುವುದು ಸಾಬೀತು ಆಗಿರುವುದರಿಂದ ಆರೋಪಿ ವಿರುದ್ಧ ಮಂಗಳವಾರ ನ್ಯಾಯಾಧೀಶ ವಿಜಯಕುಮಾರ ಎಮ್. ಆನಂದಶೆಟ್ಟಿ ಅವರು ತೀರ್ಪು ನೀಡಿದ್ದಾರೆ. ಲಂಚ ನಿಷೇಧ ಕಾಯ್ದೆಯ ಕಲಂ 13(2) ಪ್ರಕಾರ ಶಿಕ್ಷೆ ವಿಧಿಸಲಾಗಿದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ದೊರೆತ ಚಿನ್ನಾಭರಣ ಹಾಗೂ ನಗದು ಹಣ ಜಪ್ತಿ ಮಾಡಲು ಆದೇಶಿಸಿದ್ದಾರೆ.
ಬೀದರ್ ನಗರದ ಗುರುನಗರ ಕಾಲೋನಿಯ ನಿವಾಸಿಯಾದ ಫಿರೋಜುದ್ದಿನ್ ಖಾನ್ 1982ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆಗೆ ಸೇರಿದ್ದರು. ನಂತರ ಬೀದರ, ಹುಮನಾಬಾದನಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಕಾರಂಜಾ ಕಾಲುವೆ ನಿರ್ಮಾಣ ಯೋಜನೆ, ಕಾರಂಜಾ ಏತ ನೀರಾವರಿ, ಜಲ ಸಂಪನ್ಮೂಲ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಬೀದರ ಜಿಲ್ಲೆಯ ಕಾರಂಜಾ ಕಾಲುವೆ ನಿರ್ಮಾಣ ಯೋಜನೆಯ ಹುಮನಾಬಾದ ಕ್ಯಾಂಪ್‌ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕರ್ತವ್ಯದಲ್ಲಿದಾಗ 2008ರ ಫೆ.2ರಂದು ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ನಗರದ ಗುರುನಾನಕ ಕಾಲೋನಿಯ ಅವರ ಮನೆ, ನೆಹರು ಕ್ರೀಡಾಂಗಣ ಹತ್ತಿರದ ಅವರ ಮಾವ ಲೈಕೊದ್ದೀನ್ ಮನೆ ಮತ್ತು ಗೋಲೆಖಾನಾದಲ್ಲಿನ ಅಣ್ಣ ಎಮ್.ಝಡ್.ಬಾಬರ್ ಅವರ ಮನೆಗಳ ಮೇಲೆ ದಾಳಿ ನಡೆಸಿದರು. ಹುಮನಾಬಾದ ಕಛೇರಿಯಲ್ಲಿ ಸಹ ಶೋಧನೆ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಾಗತಿಕ ಮಟ್ಟದಲ್ಲಿ ಬಸವ ಚಿಂತನೆ ತಲುಪಿಸುವುದು ಇಂದಿನ ತುರ್ತು : ಆರ್.ಕೆ.ಹುಡುಗಿ
ಆರೋಪಿಯ ಆದಾಯ, ಸ್ಥಿರಾಸ್ತಿ, ಚರಾಸ್ತಿ ಮತ್ತು ಖರ್ಚು ವೆಚ್ಚ ಲೆಕ್ಕ ಮಾಡಿದಾಗ ಅದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಕಂಡು ಬಂದಿರುವುದರಿಂದ ಲೋಕಾಯುಕ್ತ ಡಿವೈಎಸ್‌ಪಿ ಟಿ.ಜಿ. ರಾಯ್ಕರ್ ತನಿಖೆ ನಡೆಸಿ, ದೋಷರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೇಶವರಾವ ಶ್ರೀಮಾಳೆ ಅವರು ವಾದ ಮಂಡಿಸಿದ್ದಾರೆ.