ರಾಜ್ಯದಲ್ಲಿರುವ ಅನುದಾನಿತ ಶಾಲೆಗಳಲ್ಲಿ 7,129 ಶಿಕ್ಷಕರ ಕೊರತೆ ಇದೆ. ಕೋರ್ಟ್ ಆದೇಶವಿದ್ದರೂ ಸರ್ಕಾರ ಶಿಕ್ಷಕರ ನೇಮಕಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈ.ಎಚ್ ಹುಚ್ಚಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “2015ರಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ನೇಮಕಾತಿಗೆ ಸರ್ಕಾರ ಅವಕಾಶ ನೀಡುತ್ತಿಲ್ಲ. ಶಿಕ್ಷಕರ ಕೊರತೆಯಿಂದ ಸಮಸ್ಯೆ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಹಲವಾರು ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಗಣಿತ ವಿಷಯಗಳ ಶಿಕ್ಷಕರಿಲ್ಲ. ಶಿಕ್ಷಕರಿಲ್ಲದೆ ಅನೇಕ ಶಾಲೆಗಳು ಮುಚ್ಚಿವೆ. ಗ್ರಾಮೀಣ ವಿದ್ಯಾರ್ಥಿಗಳು ಹಿಂದುಳಿಯಲು ಶಿಕ್ಷಕರ ಕೊರತೆ ಪ್ರಮುಖ ಕಾರಣವಾಗಿದೆ” ಎಂದು ಹೇಳಿದ್ದಾರೆ.
“ಶಿಕ್ಷಕರ ನಿವೃತ್ತಿ, ರಾಜೀನಾಮೆ ಹಾಗೂ ಮರಣದಿಂದ ಶಿಕ್ಷಕರ ಕೊರತೆ ಎದುರಾಗಿದೆ. ಆ ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲು ಹೆಚ್ಚುವರಿ ಬಜೆಟ್ ಅಥವಾ ಯಾವುದೇ ಬಜೆಟ್ ಅವಶ್ಯಕತೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.