ಜಗತ್ತಿನಲ್ಲಿ ಯಾಂತ್ರೀಕರಣದ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ರಾಕ್ಷಸೀಯ ಸಮಸ್ಯೆ ನಿರ್ಮೂಲಗೆ 70:30 ಅನುಪಾತದ ಆರ್ಥಿಕತೆಯನ್ನು ಪ್ರತಿಪಾದಿಸಬೇಕು. ಇನ್ನೂ ನೂರು ವರ್ಷಗಳಲ್ಲಿ ನಾಶವಾಗಲಿರುವ ಮನುಕುಲವನ್ನು ಉಳಿಸಿಕೊಳ್ಳಲು ಈ ಕ್ರಮ ತುರ್ತಾಗಿದೆ ಎಂದು ದೇಶಿ ಚಳವಳಿ ರೂವಾರಿ ಹೆಗ್ಗೋಡು ಪ್ರಸನ್ನ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ‘ಬಾಪೂ ಕೆ ಲೋಗ್’ ಎಂಬ ರಾಷ್ಟ್ರೀಯ ವೇದಿಕೆಯ ರೂಪುರೇಷೆಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. “ತಾಪಮಾನ ಏರಿಕೆ, ಲಾಭಗಳಿಗಾಗಿ ನಡೆಯುತ್ತಿರುವ ಯುದ್ಧಗಳಿಂದ ಧಾರ್ಮಿಕ ತಿಕ್ಕಾಟದಂತಹ ಅನಾಹುತಗಳು ಘಟಿಸುತ್ತಿವೆ. ಅಸಮಾನತೆ, ಸಾಮಾಜಿಕ ಸಂಘರ್ಷ, ಯುದ್ಧಕೋರತನ ಭಯೋತ್ಪಾದಕ ಗುಂಪುಗಳಿಂದ ಶಾಂತಿಯು ಭಗ್ನವಾಗಿದೆ. ಈ ಪ್ರಳಯ ತಡೆಯುವ ನಿಟ್ಟಿನಲ್ಲಿ ಗಾಂಧಿ ಚಿಂತನೆ ಪರಿಹಾರ ನೀಡಲಿದೆ” ಎಂದರು.
:ಯಾಂತ್ರೀಕರಣ ರಾಕ್ಷಸೀಯ ಸಮಸ್ಯೆಯಾಗಿದ್ದು, ಮತ್ತೊಂದು ದೈತ್ಯ ಸಮಸ್ಯೆಯನ್ನು ಹುಟ್ಟುಹಾಕುತ್ತಿದೆ. ವಸ್ತುಗಳ ಉತ್ಪಾದನೆಯಲ್ಲಿ ಯಂತ್ರಗಳ ಬಳಕೆ ಕಡಿಮೆಯಿರಬೇಕು. ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು. ಇದನ್ನೇ ಬಸವಾದಿ ಶರಣರು ಹೇಳಿದರು ಮತ್ತು ಅವರು ಕಾಯಕದಲ್ಲೇ ಕೈಲಾಸ ಕಂಡರು. ಕಾಯಕ ಪ್ರಣೀತ ಬದುಕು ಮಾತ್ರ ಧಾರ್ಮಿಕ ಬದುಕಾಗಲು ಸಾಧ್ಯ. ಕಾರ್ಮಿಕರಿದ್ದಲ್ಲಿ ದೇವರಿಗೆ ಮನ್ನಣೆ ದೊರೆಯುತ್ತದೆ” ಎಂದು ನುಡಿದರು.
“ಶೇ.30ಕ್ಕಿಂತ ಹೆಚ್ಚು ಶ್ರಮಾಧಾರಿತ ಕೆಲಸ ನಾಶವಾಗಬಾರದು. ಇದರಿಂದ ಕೆಲಸ ನಾಶವಾಗುವುದಲ್ಲದೆ ಧರ್ಮವೂ ನಾಮಾವಶೇಷವಾಗುತ್ತದೆ. ಬಡವರು ಮತ್ತಷ್ಟು ಬಡವರಾಗುತ್ತಾ ಸಾಗುತ್ತಾರೆ. ಪವಿತ್ರ ಆರ್ಥಿಕತೆಯ ಭಾಗವಾಗಿ 70:30 ಅನುಪಾತದ ಆರ್ಥಿಕತೆಯು ಮಾನವ ಶ್ರಮವನ್ನು ಹೆಚ್ಚಿಸುವುದು ಮತ್ತು ಯಂತ್ರಗಳ ಬಳಕೆ ಕಡಿಮೆ ಮಾಡುವ ಮೂಲಕ ಮನುಕುಲದ ಶ್ರೇಯೋಭಿವೃದ್ಧಿಯನ್ನು ಬಯಸುತ್ತದೆ” ಎಂದರು.
“ಬಡವರು, ಪ್ರೀತಿ, ಪ್ರೇಮದ ಬಗ್ಗೆ ಮಾತನಾಡುವವರು ಇಂದು ದೈವ ವಿರೋಧಿಗಳಾಗಿಯೂ, ಅಂಬಾನಿ ಅದಾನಿಯಿಂದ ಹಣ ಪಡೆದು ಮಂದಿರ ಕಟ್ಟಿಸಿದವರು ದೈವ ಭಕ್ತರಾಗಿಯೂ ಕಾಣುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಯಾರನ್ನೂ ಬೈಯುವ ಅಗತ್ಯವಿಲ್ಲ. ವ್ಯವಸ್ಥೆಯನ್ನು ಸರಿಪಡಿಸುವುದಷ್ಟೇ ಮುಖ್ಯವಾಗಿದೆ. ಯುದ್ಧ ಸಾಮಗ್ರಿ, ಯಂತ್ರಗಳ ಮಾರಾಟದ ಹಿಂದೆ ವ್ಯಾಪಾರದ ಉದ್ದೇಶವಿದೆ. ವ್ಯಾಪಾರದ ಹಿಂದೆ ಯುದ್ಧಗಳು ಅಡಗಿವೆ. ಈ ಅಜೆಂಡಾಗಳಿಗೆ ಬಡವರು ಬಲಿಯಾಗುತ್ತಿದ್ದಾರೆ. ಇವುಗಳಿಗೆ ಪರ್ಯಾಯವಾಗಿ ಯಾವುದೇ ಕ್ಷೇತ್ರದಲ್ಲಿ ರಚನಾತ್ಮಕ ಚಳವಳಿಗಳನ್ನು ಕಟ್ಟುವುದೇ ಬಾಪೂ ಕೆ ಲೋಗ್ ಗುರಿ” ಎಂದು ತಿಳಿಸಿದರು.
ನಿಕೇತ್ ರಾಜ್ ಮೌರ್ಯ ಮಾತನಾಡಿ, “ಮಹಾತ್ಮಗಾಂಧಿ ಎನ್ನುವುದು ಸಮಾಜವನ್ನು ಎಚ್ಚರಿಸುವ ಶಕ್ತಿ. ಭಾರತದಂತಹ ದೇಶಕ್ಕೆ ಸಮೂಹ ಉತ್ಪಾದನೆ ಬೇಕಿಲ್ಲ. ಸಮೂಹದಿಂದ ಉತ್ಪಾದನೆಯಾಗುವಂತೆ ಮಾಡುವುದೇ ನಮ್ಮ ತತ್ವವಾಗಬೇಕು. ಗುಡಿ ಕೈಗಾರಿಕೆಗಳತ್ತ ಹೆಜ್ಜೆ ಹಾಕುವುದರಿಂದ ಜಾಗತಿಕ ಪರಿಣಾಮ ಕಡಿಮೆಯಾಗಲಿದೆ” ಎಂದರು.
ಗಾಂಧಿವಾದಿ ಸಿ.ಯತಿರಾಜು ಮಾತನಾಡಿ, “ತಂತ್ರಜ್ಞಾನದ ನಾಗಾಲೋಟದಲ್ಲಿ ಶ್ರಮ ಸಂಸ್ಕೃತಿ ನಾಶವಾಗುವುದೇನೋ ಎಂಬ ಆತಂಕ ಎದುರಾಗಿದೆ. ಮಿತಿ ಮೀರಿದ ತಂತ್ರಜ್ಞಾನದಿಂದ ಅಸಮಾನತೆ ಹೆಚ್ಚುತ್ತಿದೆ. ಕೆಲವೇ ಕಂಪನಿಗಳು ಜಗತ್ತನ್ನ ಸುತ್ತುವರೆದಿವೆ. ಇಂತಹ ಬಿಕ್ಕಟ್ಟಿನಲ್ಲಿ ಗಾಂಧಿವಾದವನ್ನು ಪೂರಕವಾಗಿ ಬಳಸಿಕೊಳ್ಳಬಹು”ದು ಎಂದರು.
ಸಭೆಯಲ್ಲಿ ಚಿಂತಕ ಪ್ರೊ.ಕೆ.ದೊರೈರಾಜು, ಜನ ಸಂಗ್ರಾಮ ಪರಿಷತ್‌ನ ಪಂಡಿತ್ ಜವಾಹರ್, ವಿಜ್ಞಾನಿ ದಿನೇಶ್. ಟಿ.ಬಿ., ಸ್ಲಂ ಜನಾಂದೋಲನದ ನರಸಿಂಹ ಮೂರ್ತಿ, ಸಹಜ ಕೃಷಿಕ ರವೀಶ್ ಮತ್ತಿತರರಿದ್ದರು.