ಭಾರತದ ಸಂವಿಧಾನಕ್ಕೆ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಸಂಘಟನೆಗಳು ಜೊತೆಗೂಡಿ, ಸಂವಿಧಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಬೆಂಗಳೂರಿನ ರಿಕ್ಲೇಮ್ ಕಾನ್ಸ್‌ಟಿಟ್ಯೂಷನ್, ಇಂಟರ್ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಆರ್ಟ್ ಕಲ್ಚರ್ & ಡೆಮಾಕ್ರಸಿ ಹಾಗೂ ಆರ್ ಆರ್ ನಾಯ್ಕ್ ಸೇವಾ ಟ್ರಸ್ಟ್ ಎಂಬ ಸಂಘಟನೆಗಳು ಜೊತೆಗೂಡಿ ವರ್ಷವಿಡೀ ಭಾರತೀಯ ಸಂವಿಧಾನದ 75 ನೇ ವರ್ಷದ ಆಚರಣೆಯನ್ನು ನಾನಾ ಕಾರ್ಯಕ್ರಮಗಳ ಮೂಲಕ ಆಯೋಜಿಸಲು ತೀರ್ಮಾನಿಸಿದೆ.
ಈ ಬಗ್ಗೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟಕರು, ಸಾಂವಿಧಾನಿಕ ಮೌಲ್ಯಗಳು ಮತ್ತು ಸಮಕಾಲೀನ ಕಾಲದಲ್ಲಿ ಅವುಗಳ ಪ್ರಸ್ತುತತೆಯ ಕುರಿತು ಚರ್ಚೆಗಳಲ್ಲಿ ಜನರು ತೊಡಗಿಸಿಕೊಳ್ಳುವಂತೆ ಮಾಡಲು ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಭಾರತದ ಗುರುತನ್ನು ಮತ್ತು ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಮೂಲಭೂತ ಹಕ್ಕುಗಳಿಗೆ ಅದರ ಬದ್ಧತೆಯನ್ನು ರೂಪಿಸುವಲ್ಲಿ ಸಂವಿಧಾನದ ಪಾತ್ರದ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಲು ವೇದಿಕೆಯಾಗಿ ಇದು ಕಾರ್ಯ ನಿರ್ವಹಿಸಲಿದೆ ಎಂದರು.
26 ನವೆಂಬರ್ 2023 ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಏಕೆಂದರೆ ಇದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷದ ಆರಂಭವಾಗಿದೆ. ಭಾರತದ ಸಂವಿಧಾನವು ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಚೌಕಟ್ಟಿನ ಮೂಲಾಧಾರವಾಗಿ ನಿಂತಿದೆ. ಭಾರತದ ಹುಟ್ಟಿನಿಂದಲೇ ದೇಶದ ಪ್ರಗತಿ, ಮೌಲ್ಯಗಳು ಮತ್ತು ಆಕಾಂಕ್ಷೆಗಳಿಗೆ ಮಾರ್ಗದರ್ಶನ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ನಾವು ದೇಶದ ಎಲ್ಲ ನಾಗರಿಕರಿಗೆ ತಮ್ಮ ಶಾಲೆಗಳು, ಕಾಲೇಜುಗಳು, ಕೆಲಸದ ಸ್ಥಳಗಳು ಅಥವಾ ಯಾವುದೇ ಸಮುದಾಯ ಕಾರ್ಯಕ್ರಮಗಳಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಆಚರಿಸಲು ಮನವಿ ಮಾಡುತ್ತೇವೆ. ಸಂವಿಧಾನವು ಜನರ ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಂಘಟಕರು ಕರೆ ನೀಡಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರರ ಮಾತಿನಲ್ಲಿ “ಸಾಂವಿಧಾನಿಕ ನೈತಿಕತೆಯು ಸಹಜ ಭಾವನೆಯಲ್ಲ. ಅದನ್ನು ಬೆಳೆಸಬೇಕು. ನಮ್ಮ ಜನರು ಇನ್ನೂ ಕಲಿಯಬೇಕಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.
75 ನೇ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ನ.26ರಂದು ಅಶೋಕ ಸ್ತಂಭದಿಂದ (ಜಯನಗರ) ವಿಧಾನಸೌಧದ ಮೂಲಕ ಸಂವಿಧಾನ ವೃತ್ತಕ್ಕೆ (ಯಶವಂತಪುರ) ‘ಸೈಕಥಾನ್’ ಸೈಕಲ್ ಸವಾರಿ ಬೆಳಗ್ಗೆ 7 ಗಂಟೆಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನ. 26ರಂದು ಅಶೋಕ ಪಿಲ್ಲರ್ ಮತ್ತು ಸಂವಿಧಾನ ವೃತ್ತದಲ್ಲಿ ರಕ್ತದಾನದ ವ್ಯಾನ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಅಂದು Bleed For Unity ಎಂಬ ಧ್ಯೇಯ ವಾಕ್ಯದಲ್ಲಿ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಸಂವಿಧಾನ ಮತ್ತು ಆದರ ರಚನೆಯ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಲಿದೆ. ಸಾಂವಿಧಾನಿಕ ಮೌಲ್ಯಗಳನ್ನು ಪ್ರದರ್ಶಿಸಲು ಸಂಗೀತ/ನೃತ್ಯ/ರಂಗಭೂಮಿ ಪ್ರದರ್ಶನದೊಂದಿಗೆ ಸಂಯೋಜಿತವಾದ Culture Katte ಚರ್ಚೆ, ಭಾರತದ ಸಂವಿಧಾನದ ಕಲಾಕೃತಿಯನ್ನು 26 ನವೆಂಬರ್ 2023 ರಿಂದ ನಗರದಾದ್ಯಂತ ವಿವಿಧ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪ್ರದರ್ಶನ, ವಿಶಿಷ್ಟವಾದ ಗೊಂಬೆಗಳ ಸಾಂಸ್ಕೃತಿಕ ಪ್ರದರ್ಶನ ಸೇರಿದಂತೆ 26 ನವೆಂಬರ್ 2024ರವರೆಗೆ ದೇಶಾದ್ಯಂತ ನಾನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಐಐಎಸ್‌ಸಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿಜಯ್ ಚಂದ್ರು, ಭಾಷಾಶಾಸ್ತ್ರಜ್ಞ ಪ್ರೊ.ಅಬ್ದುರ್ ರೆಹಮಾನ್ ಪಾಷಾ, ಡಾ. ಗಿರೀಶ್ ಮೂಡ್, ಸಾಮಾಜಿಕ ಕಾರ್ಯಕರ್ತರು ಹಾಗೂ ಯುವ ಮುಖಂಡರುಗಳಾದ ನಿಷ್ಕಲಾ, ವಿನಯ್ ಕುಮಾರ್, ರುದ್ರು ಪುನೀತ್ ಉಪಸ್ಥಿತರಿದ್ದರು.