ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 8 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ಮತ್ತಷ್ಟು ಮಂದಿ ಪ್ರಭಾವಿತರಾಗುತ್ತಾರೆ. ಆತ್ಮಹತ್ಯೆ ತಡೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನಿರ್ಮಾನ್ಸ್ ಮನೋವೈದ್ಯರು ಹೇಳಿದ್ದಾರೆ.
ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ’ ಕಾರ್ಯಕ್ರಮದಲ್ಲಿ ಮನೋವೈದ್ಯರು ಮತ್ತು ಪ್ರಾಧ್ಯಾಪಕರು ಆತ್ಮಹತ್ಯೆ ತಡೆ ಕುರಿತು ಸಂವಾದ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿಮ್ಹಾನ್ಸ್‌ನ ನಿವೃತ್ತ ಪ್ರಾಧ್ಯಾಪಕ ಡಾ. ಶೇಖರ್ ಪಿ. ಶೇಷಾದ್ರಿ, “ಹಲವರು ತಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಮಾನಸಿಕವಾಗಿ ಕುಗ್ಗುತ್ತಾರೆ. ಮಾತ್ರವಲ್ಲ, ಅಪರಾಧ, ಅವಮಾನಗಳು ಸೇರಿದಂತೆ ನಾನಾ ಸಂದರ್ಭಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತವೆ. ಆತ್ಮಹತ್ಯೆಯನ್ನು ತಡೆಯಲು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರ ಧ್ವನಿಗಳನ್ನು ಬಳಸಿಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು” ಎಂದರು.
ಕಾರ್ಯಕ್ರಮದಲ್ಲಿ ’ಸುಸೈಡ್ ಲಾಸ್ ಸರ್ವೈವರ್ಸ್ ಫೋರಂ’ ಸಂಘಟಕ ಡಾ. ಅನೀಶ್ ವಿ. ಚೆರಿಯನ್, ಅನನ್ಯಾ–ಎ ಫೌಂಡೇಶನ್‌ನ ಸಂಸ್ಥಾಪಕಿ ಸ್ನೇಹಾ ರಾವ್, ಹಿರಿಯ ಪ್ರಾಧ್ಯಾಪಕ ಡಾ. ಪ್ರಭಾಚಂದ್ರ ಇದ್ದರು.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.