ಕಲುಷಿತ ನೀರು ಸೇವಿಸಿ 80ಕ್ಕೂ ಅಧಿಕ ಜನ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮ ಪಂಚಾಯಿತಿ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಪೂರೈಕೆಯಾದ ಕಲುಷಿತ ನೀರು ಸೇವಿಸಿ ಸೋಮವಾರ 80ಕ್ಕೂ ಅಧಿಕ ಜನ ವಾಂತಿ-ಭೇದಿಯಿಂದ ಬಳಲಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರನ್ನು ಮಂಗಳವಾರ ಮುಖ್ಯಮಂತ್ರಿ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್, ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್, ತಾಲೂಕು ವೈದ್ಯಾಧಿಕಾರಿ ಡಾ.ಸುಶೀಲಕುಮಾರ್ ಅಂಬೂರೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ʼಗ್ರಾಮದಲ್ಲಿ ಇಂತಹ ಅವಘಡ ಸಂಭವಿಸಲು ಗ್ರಾಪಂ ಪಂಚಾಯಿತಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೇ ಕಾರಣ. ಟ್ಯಾಂಕ್ ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಹೇಳಿದರೂ ಯಾರು ಕೂಡ ಗಮನಹರಿಸದ ಕಾರಣಕ್ಕೆ ದುರ್ಘಟನೆ ಸಂಭವಿಸಿದೆʼ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಗಾಂಧೀ ಪರಿಕಲ್ಪನೆಗಳು
ಶಾಸಕರ ಸೂಚನೆ ಮೇರೆಗೆ ನಿಂಬರ್ಗಾ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆ ಜಾಗಕ್ಕೆ ಸುಂಟನೂರ ಗ್ರಾಪಂ ಪಿಡಿಒ ಪ್ರವೀಣ ಅವರನ್ನು ನಿಯೋಜಿಸಲಾಗಿದೆ ಎಂದು ಆಳಂದ ತಾ.ಪಂ. ಇಓ ಮಾಣಪ್ಪ ಕಟ್ಟಿಮನಿ ತಿಳಿಸಿದ್ದಾರೆ.