ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಅಡಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಮತ್ತೊಂದೆಡೆ ದುಪ್ಪಟ್ಟು ವಿದ್ಯುತ್ ದರ ಏರಿಕೆ ನೋಡಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ, ಕೊಪ್ಪಳದ ವೃದ್ಧೆಯೊಬ್ಬರಿಗೆ 1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದ್ದು, ವೃದ್ಧೆ ತಬ್ಬಿಬ್ಬಾಗಿದ್ದಾರೆ.
ಕೊಪ್ಪಳದ ಭಾಗ್ಯ ನಗರದಲ್ಲಿ ಗಿರಿಜಮ್ಮ ಎಂಬುವವರಿಗೆ ಜೆಸ್ಕಾಂನಿಂದ ಒಂದು ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಪ್ರತಿ ತಿಂಗಳು 70 ರಿಂದ 80 ರೂ. ಬರ್ತಿದ್ದ ಬಿಲ್ ಈಗ ದಿಢೀರನೆ 1 ಲಕ್ಷ ಬಂದಿದ್ದು, ವಿದ್ಯುತ್ ಬಿಲ್ ನೋಡಿ ಅಜ್ಜಿ ಮತ್ತು ಅವರ ಮಗ ಶಾಕ್ ಆಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ನಮಗೆ ಇದೆಂತ ಶಿಕ್ಷೆ ಎಂದು ಅಜ್ಜಿ ಕಣ್ಣೀರಿಟ್ಟಿದ್ದಾರೆ.
90 ವರ್ಷದ ಗಿರಿಜಮ್ಮ ಅವರು ಮಗನೊಂದಿಗೆ ವಾಸವಿದ್ದಾರೆ. ಮಗ ಕೂಲಿ ಕೆಲಸಕ್ಕೆ ಹೋಗುತ್ತಾನೆ. ಸಣ್ಣ ತಗಡಿನ ಶೆಡ್ನಿಂದ ಮನೆ ಮಾಡಿಕೊಳ್ಳಲಾಗಿದ್ದು, ಎರಡೇ ಎರಡು ಬಲ್ಬ್‌ಗಳು ಇವೆ. ಆದರೆ, ಈ ಬಾರಿ ಜೆಸ್ಕಾಂ ಬರೋಬ್ಬರಿ 1,03,315 ರೂ. ಬಿಲ್ ನೀಡಿ ಶಾಕ್ ನೀಡಿದೆ. ಅಜ್ಜಿ ಮನೆಗೆ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು.
ಹೊಸ ಮೀಟರ್ ಅಳವಡಿಸಿದ ಬಳಿಕ ಕರೆಂಟ್ ಬಿಲ್ ಲಕ್ಷಕ್ಕೆ ಏರಿದೆ. ಆರು ತಿಂಗಳ ಹಿಂದೆ ಜೆಸ್ಕಾಂ ಸಿಬ್ಬಂದಿ ವೃದ್ದೆಯ ಮನೆಗೆ ಮೀಟರ್ ಅಳವಡಿಸಿದ್ದರು. 6 ತಿಂಗಳಲ್ಲಿ ವಿದ್ಯುತ್ ಬಿಲ್ 1 ಲಕ್ಷ ದಾಟಿದೆ. ಒಂದೊತ್ತಿನ ಊಟಕ್ಕೆ ಪರದಾಡೋ ಅಜ್ಜಿಗೆ ಲಕ್ಷ ಬಿಲ್ ಬಂದಿರುವುದರಿಂದ ಅಜ್ಜಿ ಬಿಲ್ ಕಟ್ಟುವುದು ಹೇಗೆ ಎಂದು ಕಣ್ಣೀರು ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಕ್ಕಿ ವಿತರಣೆಯಲ್ಲಿ ರಾಜಕೀಯ ಬೇಡ; ಕೇಂದ್ರ ಗೃಹ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಮನವಿ
ಅಜ್ಜಿ ಮನೆಗೆ ಜೆಸ್ಕಾಂ ಅಧಿಕಾರಿಗಳ ಭೇಟಿ; ಪರಿಶೀಲನೆ
ಕೊಪ್ಪಳದಲ್ಲಿ ವೃದ್ಧೆ ಮನೆಗೆ 1 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದ್ದು, ವೃದ್ಧೆ ಗಿರಿಜಮ್ಮ ನಿವಾಸಕ್ಕೆ ಜೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜೇಶ್ ಭೇಟಿ ಪರಿಶೀಲನೆ ನಡೆಸಿದರು.
“2021ರಿಂದ ಮೀಟರ್ ರೀಡಿಂಗ್ ತೊಂದರೆಯಿಂದ ಬಿಲ್ ಬಂದಿದೆ. ಅಜ್ಜಿ ಗಿರಿಜಮ್ಮ ವಿದ್ಯುತ್ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಸಿಬ್ಬಂದಿ ಮತ್ತು ಬಿಲ್ ಕಲೆಕ್ಟರ್ ತಪ್ಪಿನಿಂದಾಗಿ ಹೀಗಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. ಇಂತಹ ಯಾವುದೇ ಪ್ರಕರಣಗಳಿದ್ದರೂ ನಮ್ಮ ಗಮನಕ್ಕೆ ತನ್ನಿ” ಎಂದು ರಾಜೇಶ್ ಸ್ಪಷ್ಟನೆ ನೀಡಿದ್ದಾರೆ.
ಕರೆಂಟ್ ಬಿಲ್ ಕಟ್ಟಬೇಕಿಲ್ಲ ಎಂದಿದ್ದಕ್ಕೆ ವೃದ್ಧೆ ಗಿರಿಜಮ್ಮ ಜೆಸ್ಕಾಂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಅಜ್ಜಿ 1 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟಬೇಕಿಲ್ಲ; ಇಂಧನ ಸಚಿವ ಕೆ ಜೆ ಜಾರ್ಜ್
ಈ ಕುರಿತು ಇಂಧನ ಸಚಿವ ಕೆ ಜೆ ಜಾರ್ಜ್ ಖಾಸಗಿ ಸುದ್ದಿವಾಹಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, “ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಆಗಿದ್ದಕ್ಕೆ ಕಾರಣ ನಾವಲ್ಲ. ಹಿಂದಿನ ಸರ್ಕಾರವಿದ್ದಾಗ ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮಾಡಿದೆ. ಏಪ್ರಿಲ್, ಮೇ ತಿಂಗಳಿನ ಬಿಲ್ ಸಂಗ್ರಹ ಮಾಡಲು ಹೇಳಿದ್ದಾರೆ. ಒಂದೇ ಬಾರಿ ಎರಡು ತಿಂಗಳ ವಿದ್ಯುತ್ ದರ ಏರಿಕೆಯ ಬಿಲ್ ಬಂದಿದೆ. ನಮ್ಮ ಸಾಫ್ಟ್ವೇರ್ ಹಳೆಯದು, ಹೊಸ ಸಾಫ್ಟ್ವೇರ್ ಹಾಕಬೇಕು. ಕೆಲವೆಡೆ ಮೀಟರ್ ಸಮಸ್ಯೆಯಿಂದ ವಿದ್ಯುತ್ ದರ ಹೆಚ್ಚಳ ಆಗಿದೆ. ಕೊಪ್ಪಳದಲ್ಲೂ ಅಜ್ಜಿ ಮನೆಗೆ ಮೀಟರ್ ಸಮಸ್ಯೆಯಿಂದ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ. ಅಜ್ಜಿ ಅಷ್ಟೊಂದು ಕರೆಂಟ್ ಬಿಲ್ ಕಟ್ಟಬೇಕಿಲ್ಲ” ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.