ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಸರ್ಕಾರಿ ಆಸ್ಪತ್ರೆಯ ನರ್ಸ್ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್‌ನಲ್ಲಿ ನಡೆದಿದೆ. ಅನೈತಿಕ ಪೊಲೀಸ್‌ಗಿರಿ ನಡೆಸಿದ 9 ಜನರ ವಿರುದ್ಧ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಟಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹುಮನಾಬಾದ ತಾಲೂಕು ಮೂಲದ ಅಶ್ವಿನಿ ಎಂಬುವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಗ್ರಾಮದ ಎ.ಎನ್.ಎಂ ಕ್ವಾರ್ಟಸ್‌ನಲ್ಲಿ ಆರೋಗ್ಯ ಇಲಾಖೆ ಮನೆ ನೀಡಿದೆ. ಆ ಮನೆಗೆ ನುಗ್ಗಿ ಕೆಲವರು ದಾಂಧಲೆ ನಡೆಸಿದ್ದಾರೆ.
ಘಟನೆ ಬಗ್ಗೆ ದೂರು ನೀಡಿರುವ ಅಶ್ವಿನಿ, “ನಾನು ಮತ್ತು ನನ್ನ ಜೊತೆ ಇನ್ನೂ ಮೂವರು ಸೇರಿ ಮನೆ ಸ್ವಚ್ಛಗೊಳಿಸಿ ಪೂಜೆ ಮಾಡುತ್ತಿದ್ದೆವು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ 10-15 ಜನರು ರಾತ್ರಿ 8 ಗಂಟೆಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ. ಕ್ರಿಶ್ಚಿಯನ್ ಗೆ ಮತಾಂತರ ಮಾಡುತ್ತಿರುವುದಾಗಿ ಆರೋಪಿಸಿ ವಿಡಿಯೋ ಮಾಡಿದ್ದಾರೆ” ವಿವರಿಸಿದ್ದಾರೆ.
“ಪೂಜಾ ಮನೆಗೆ ಬೂಟ್ಟು, ಚಪ್ಪಲಿಗಳು ಹಾಕಿಕೊಂಡು ನುಗ್ಗಿ ಕ್ರಿಶ್ಚಿಯನ್ ದೇವರನ್ನು ಪೂಜೆ ಮಾಡುತ್ತಿದ್ದೀರಿ, ಅಂಬಾಭವಾನಿ ಪೋಟೋ ಇಟ್ಟು ಪೂಜೆ ಮಾಡಬೇಕೆಂದು ಗದರಿಸಿ ಜಾತಿ ನಿಂದನೆ ಮಾಡಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿ ಮಾನಹಾನಿ ಮಾಡಿದ್ದಾರೆ” ಎಂದು ಅಶ್ವಿನಿ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೆಇಎ ಪರೀಕ್ಷೆ ಅಕ್ರಮ ಪ್ರಕರಣ : ಹಾಸ್ಟೆಲ್ ವಾರ್ಡನ್ ಬಂಧನ
“ನಮ್ಮ ಮೇಲೆ ದೂರು ನೀಡಿದರೆ ನಿನಗೆ ಸೇವೆಯಿಂದ ತೆಗೆಯುತ್ತೇವೆ, ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ” ರಟಕಲ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.