ಅಧಿಕಾರಿಗಳ ಎಡವಟ್ಟು, ನಿರ್ಲಕ್ಷ್ಯದಿಂದಾಗಿ ಅನ್ನಭಾಗ್ಯ, ಗೃಹಲಕ್ಷ್ಮಿ, ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತವಾಗಿರುವ ನಿರ್ಗತಿಕ ವೃದ್ಧ ಮಹಿಳೆಯೊಬ್ಬರು ಸಂಕಷ್ಟದಲ್ಲಿ ಬದುಕು ದೂಡುತ್ತಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೋರಂಬಿ ಗ್ರಾ.ಪಂ.ವ್ಯಾಪ್ತಿಗೆ ಒಳಪಡುವ ರಾಚಪ್ಪ ಗೌಡಗಾಂವ್ ಗ್ರಾಮದಲ್ಲಿ ಜೀಜಾಬಾಯಿ ಮಾಧವರಾವ್ ಎನ್ನುವ ನಿರ್ಗತಿಕ ವಯೋವೃದ್ಧ ಮಹಿಳೆ ಸರ್ಕಾರದ ಸೌಲಭ್ಯ ಸಿಗದೇ ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ.
ಜೀಜಾಬಾಯಿಗೆ ಓರ್ವ ಮಗನಿದ್ದ, ಆತ ಎಂಟತ್ತು ವರ್ಷದ ಹಿಂದೆ ಸಾವನಪ್ಪಿದ್ದಾನೆ, ಸೊಸೆ ಬೇರೆ ಕಡೆ ವಾಸವಾಗಿದ್ದಾರೆ. ಸಕ್ಕರೆ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಂಡನನ್ನು ಕಳೆದುಕೊಂಡ ಜೀಜಾಬಾಯಿ, ಸದ್ಯ ತಗಡಿನ ಶೀಟ್ ಇರುವ ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ. ಅಜ್ಜಿಗೆ 64 ವರ್ಷದವಾದರೂ ʼಕಷ್ಟ ಎಲ್ಲರಿಗೂ ಬರುತ್ತದೆʼ ಎಂದು ಹೆದರದೇ ಕೂಲಿಗೆ ಹೋಗುವುದು ಅನಿವಾರ್ಯವಾಗಿದೆ.
ʼಈ ಅಜ್ಜಿಗೆ ಇಲ್ಲಿಯವರೆಗೆ ಯಾವುದೇ ಸರಕಾರಿ ಸೌಲಭ್ಯಗಳು ದೊರಕದೇ ಇರುವುದು ವಿಪರ್ಯಾಸ. ಇವರ ಬಳಿ ಚುನಾವಣೆ ಚೀಟಿ, ಆಧಾರ್ ಚೀಟಿ, ಬ್ಯಾಂಕ್ ಪಾಸ್ ಬುಕ್ ಇದೆ. ಈ ಹಿಂದೆ ಅಂತ್ಯೋದಯ ಪಡಿತರ ಚೀಟಿ ಸಹ ಇತ್ತು. ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಅಂತ್ಯೋದಯ ಪಡಿತರ ಚೀಟಿ ರದ್ದಾಗಿದ್ದು, ಅಜ್ಜಿಯ ಹೆಸರು ಬಿಪಿಎಲ್ ಚೀಟಿ ಪಟ್ಟಿಗೆ ಸೇರ್ಪಡೆಯಾಗಿದೆ. ಇದರಿಂದಾಗಿ ಕಳೆದ 2 ವರ್ಷದಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಕೂಡ ನೀಡುತ್ತಿಲ್ಲ. ಇನ್ನು ವೃದ್ಧಾಪ್ಯ ವೇತನ, ವಿಧವಾ ವೇತನ, ಗೃಹಲಕ್ಷ್ಮಿ ಯೋಜನೆಯಿಂದ ವಂಚಿತಗೊಂಡಿದ್ದಾರೆ.
ʼಗಂಡ, ಮಗನನ್ನು ಕಳೆದುಕೊಂಡು ಒಬ್ಬಂಟಿಯಾಗಿ ಬದುಕುತ್ತಿದ್ದೇನೆ. ನನಗೆ ಒಂದು ಗುಂಟೆ ಜಮೀನು ಕೂಡ ಇಲ್ಲ. ಆದರೆ ಕಳೆದ ಎರಡು ವರ್ಷದಿಂದ ಇರುವ ಉಚಿತ ರೇಷನ್ ಕಾರ್ಡ್ ಕಟ್ ಮಾಡ್ಯಾರ್. ಹಿಂಗಾಗಿ ತಿಂಗಳ ರೊಕ್ಕ, ಗೃಹಲಕ್ಷ್ಮಿ, ರೇಷನ್ ಏನೂ ಬರಲ್ಲ.ಮೊದಲೇ ಕೂಲಿ ಮಾಡೋಕೆ ಕೈಲಾಗಲ್ಲ, ಬದುಕೋದು ಭಾಳ್ ಕಷ್ಟ ಆಗ್ಯಾದ್. ಈಗಾದರೂ ಅಧಿಕಾರಿಗಳು ಹೊಸ ರೇಷನ್ ಕಾರ್ಡ್ ಮಾಡ್ಸಿ, ತಿಂಗಳ ರೊಕ್ಕ ಕೊಡಲಿʼ ಎಂದು ವೃದ್ಧ ಮಹಿಳೆ ಜೀಜಾಬಾಯಿ ಈ ದಿನ.ಕಾಮ್ ಜೊತೆಗೆ ಮಾತನಾಡಿ ಅಳಲು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಶಾಸಕ ಮುನಿರತ್ನ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವಂತೆ ಮುಖ್ಯಮಂತ್ರಿಗೆ ಮನವಿ
ಈ ಬಗ್ಗೆ ಭಾಲ್ಕಿ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರಿ ಅವರಿಗೆ ವಿಚಾರಿದಾಗ, ʼಜೀಜಾಬಾಯಿ ಅವರ ಪಡಿತರ ಚೀಟಿ ಬದಲಾವಣೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಹೊಸ ರೇಷನ್ ಕಾರ್ಡ್ ಬದಲಾವಣೆ ಮಾಡಿಕೊಡಲಾಗುವುದು. ರೇಷನ್ ಕಾರ್ಡ್ ಬಂದ ಬಳಿಕ ವೃದ್ಧಾಪ್ಯ ವೇತನ ಸಹ ಮಂಜೂರು ಮಾಡಲಾಗುವುದುʼ ಎಂದು ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.