ಡಾಭಾದಲ್ಲಿ ಕ್ಲಿಕ್ಕಿಸಿದ್ದ ಫೋಟೋಗಳನ್ನು ಕಳಿಸಲಿಲ್ಲ ಎಂಬ ಕಾರಣಕ್ಕೆ ಯುವಕನನ್ನು ಗುಂಪೊಂದು ಇರಿದು ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
18 ವರ್ಷದ ಯುವಕ ಸೂರ್ಯ ಹತ್ಯೆಯಾದ ದುರ್ದೈವಿ. ದೊಡ್ಡಬಳ್ಳಾಪುರ ಹೊರಭಾಗದಲ್ಲಿರುವ ಢಾಭಾದಲ್ಲಿ ಜನರನ್ನು ಆಕರ್ಷಿಸಲು ವರ್ಣರಂಜಿತ ಚಿತ್ರಗಳನ್ನು ಬಿಡಿಸಲಾಗಿದೆ. ಅಲ್ಲಿಗೆ ತೆರಳಿದ್ದ ಸೂರ್ಯ ಮತ್ತು ಸ್ನೇಹಿತರು ತಮ್ಮ ಚಿತ್ರಗಳನ್ನು ಕ್ಯಾಮೆರಾದಲ್ಲಿ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.
ಆ ವೇಳೆಗೆ, ಅಲ್ಲಿಗೆ ಬಂದ ಮತ್ತೊಂದು ಗುಂಪು, ತಮ್ಮ ಫೋಟೋಗಳನ್ನೂ ತೆಗೆಯುವಂತೆ ಒತ್ತಾಯಿಸಿದ್ದಾರೆ. ಮೊದಲಿಗೆ ಸೂರ್ಯ ಮತ್ತು ಆತನ ಸ್ನೇಹಿತರು ಫೋಟೋ ತೆಗೆಯಲು ನಿರಾಕರಿಸಿದ್ದಾರೆ. ಬಳಿಕ, ಫೋಟೋಗಳನ್ನು ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೋಟೋಗಳನ್ನು ಕೂಡಲೇ ವಾಟ್ಸಾಪ್‌ನಲ್ಲಿ ಕಳಿಸುವಂತೆ ಆ ಗುಂಪು ಒತ್ತಡ ಹಾಕಿದೆ. ಆದರೆ, ಕ್ಯಾಮೆರಾದ್ಲಿ ಫೋಟೋ ತೆಗೆದಿದ್ದರಿಂದ, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಬಳಸಿ ಫೋಟೋಗಳನ್ನು ಕಳಿಸಬೇಕು. ಈಗಲೇ ಕಳಿಸಲು ಸಾಧ್ಯವಿಲ್ಲ ಎಂದು ಸೂರ್ಯ ಹೇಳಿದ್ದಾರೆ.
ಸೂರ್ಯನ ಮಾತು ಕೇಳದ ಆ ಗುಂಪು ವಾಗ್ವಾದಕ್ಕಿಳಿದಿದೆ. ಆ ಗುಂಪಿನಲ್ಲಿದ್ದ ದಿಲೀಪ್ ಎಂಬಾತ ಚಾಕುವಿನಿಂದ ಸೂರ್ಯನ ಎದೆಗೆ ಇರಿದಿದ್ದಾನೆ. ತೀವ್ರ ಗಾಯಗೊಂಡ ಸೂರ್ಯನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸೂರ್ಯ ಮೃತಪಟ್ಟಿದ್ದಾನೆ. ಆರೋಪಿಗಳ ಗುಂಪು ಪರಾರಿಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳಲ್ಲಿ ಇಬ್ಬರ ಗುರುತು ಪತ್ತೆಯಾಗಿದೆ. ಉಳಿದವರನ್ನು ಗುರುತಿಸಿ ಶೀಘ್ರವೇ ಬಂಧಿಸುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಲ್ದಾನಿ ತಿಳಿಸಿದ್ದಾರೆ.